ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿರುವ ಕುರಿ ಸಾಕಣೆ ಹೈಟೆಕ್ ಶೆಡ್. 
ಧಾರವಾಡ

ಕುರಿ ಸಾಕಣೆ ಕೈತುಂಬಾ ಕಾಸು SHEEP FARMING

ಪ್ರಮುಖ ಮುಖ್ಯಾಂಶಗಳು

  • ವರ್ಷಕ್ಕೆ 50 ಲಕ್ಷ ರೂ. ಆದಾಯ
  • ಪ್ರತಿ ತಿಂಗಳು 55 ಮರಿ ಮಾರಾಟ
  • ಮಂಡ್ಯ, ಮೈಸೂರು ಭಾಗದಿಂದ ಹೆಚ್ಚು ಬೇಡಿಕೆ
  • 5 ತಿಂಗಳು ಮುಂಗಡ ಬುಕಿಂಗ್
  • ಕುರಿ ಹಿಕ್ಕಿ ಗೊಬ್ಬರದಿಂದ ಪ್ರತಿ ತಿಂಗಳು ಲಕ್ಷ ರೂ. ಲಾಭ
ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ 
ರೈತರು ಇತ್ತೀಚಿನ ದಿನಗಳಲ್ಲಿ ಕೃಷಿಯೊಂದಿಗೆ ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಂಥ ಉಪಕಸುಬುಗಳ ಮೂಲಕ ಯಶಸ್ಸು ಗಳಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮೊರಬ ಗ್ರಾಮದ ರೈತ ಮಂಜುನಾಥ ಈಶ್ವರಪ್ಪ ಕಾಲವಾಡ ಕುರಿ ಸಾಕಾಣಿಕೆಯಿಂದ 2025-26ನೇ ಸಾಲಿನಲ್ಲಿ 50 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಪಿಯುಸಿ ಓದಿರುವ ರೈತ ಮಂಜುನಾಥ ಕಾಲವಾಡ 2019-20ರಲ್ಲಿ 10 ಕುರಿ ಮರಿಗಳೊಂದಿಗೆ ಕುರಿ ಸಾಕಾಣಿಕೆ ಆರಂಭಿಸಿದ್ದು, ಸದ್ಯ ಇವರ ಬಳಿ 550 ಕುರಿಗಳಿವೆ. ಒಂದು ಕುರಿ 6 ತಿಂಗಳಿಗೆ ಒಂದರಂತೆ ವರ್ಷಕ್ಕೆ 2 ಬಾರಿ ಮರಿ ಹಾಕುತ್ತದೆ. ಒಂದು ಕುರಿ ಐದಾರು ವರ್ಷ ಮರಿ ಹಾಕಿದ ಬಳಿಕ ಅವುಗಳನ್ನು ಮಾರಾಟ ಮಾಡಲಾಗುತ್ತದೆ. ಹೀಗೆ ಪ್ರತಿ ತಿಂಗಳು 45 ರಿಂದ 55 ಕುರಿ ಮರಿಗಳನ್ನು ಒಂದಕ್ಕೆ 8 ರಿಂದ 9 ಸಾವಿರ ರೂ.ವರೆಗೆ ಮಾರಾಟ ಮಾಡುತ್ತಾರೆ.
5 ತಿಂಗಳ ಮುಂಗಡ ಬುಕಿಂಗ್: 
ಸ್ಥಳೀಯರು ಸೇರಿದಂತೆ, ಮೈಸೂರು, ಮಂಡ್ಯ, ಹಾಸನ, ತುಮಕೂರ ಜಿಲ್ಲೆಗಳ ವ್ಯಾಪಾರಸ್ಥರು, ಗ್ರಾಹಕರು 5 ತಿಂಗಳು ಮುಂಗಡವಾಗಿ ಕುರಿಗಳ ಖರೀದಿಗೆ ಮುಂಗಡ ಬುಕಿಂಗ್ ಮಾಡಿರುತ್ತಾರೆ. ಪ್ರತಿ ತಿಂಗಳು 1ರಿಂದ 10ನೇ ತಾರೀಕಿನವರೆಗೆ ಮಾರಾಟ ಮಾಡುತ್ತಾರೆ. 
1.30 ಕೋ.ರೂ. ಯೋಜನೆ: 
ಹೈಟೆಕ್ ಶೆಡ್, ಕಾರ್ಮಿಕರ ಕೊಠಡಿ, ಮೇವು ಸಂಗ್ರಹಕ್ಕೆ ಪ್ರತ್ಯೇಕ ಕೊಠಡಿ ನಿರ್ಮಾಣ ಮತ್ತು ಕುರಿ ಖರೀದಿಗಾಗಿ ಒಟ್ಟು 1.30 ಕೋ.ರೂ. ಮೊತ್ತದ ಯೋಜನೆ ರೂಪಿಸಲಾಗಿತ್ತು. ಆ ಪೈಕಿ 2023ರಲ್ಲಿ ನಬಾರ್ಡ್‌ನಿಂದ 92 ಲಕ್ಷ ರೂ. ಸಾಲ ಸೌಲಭ್ಯ ಪಡೆದರು. ಇದರಲ್ಲಿ ನಬಾರ್ಡ್ 41 ಲಕ್ಷ ರೂ ಸಹಾಯಧನ ನೀಡಿದ್ದು, ಇನ್ನುಳಿದ 51 ಲಕ್ಷ ರೂ. ಸಾಲದ ಹಣವನ್ನು ಪ್ರತಿ ತಿಂಗಳು ಕಂತಿನ ಮೂಲಕ ಪಾವತಿಸುತ್ತಿದ್ದಾರೆ. 
80 ಲಕ್ಷ ರೂ. ಪಾವತಿಸಿ ಕುರಿ ಖರೀದಿ: 2023ರಲ್ಲಿ 80 ಲಕ್ಷ ರೂ. ಪಾವತಿಸಿ, ಅಮಿನಗಡ, ಕುಂಕುಮಪಾಳ್ಯ ಮತ್ತು ಬಾಗಲಕೊಟೆ ಜಿಲ್ಲೆಯ ಕೆರೂರಿನಿಂದ 500 ಕುರಿ ಮರಿಗಳನ್ನು, ಒಂದಕ್ಕೆ 12ರಿಂದ 13 ಸಾವಿರ ರೂ. ನೀಡಿ ಖರೀದಿಸಿದ್ದರು.
50 ಲಕ್ಷ ರೂ. ಆದಾಯ
ಕುರಿ, ಗೊಬ್ಬರ, ಜವಾರಿ ಕೋಳಿ ಮೊಟ್ಟೆ ಮಾರಾಟದಿಂದ 2024ರ ಏ.1ರಿಂದ 2025ರ ಮಾ. 31ರವರೆಗೆ 12 ಲಕ್ಷ ರೂ., 2025ರಲ್ಲಿ 32 ಲಕ್ಷ ರೂ., 2026ರ ಆರ್ಥಿಕ ವರ್ಷದಲ್ಲಿ ಮಾ. 31ರವರೆಗೆ ಎಲ್ಲ ಖರ್ಚು ಕಳೆದು 50 ಲಕ್ಷ ರೂ., ಆದಾಯವಾಗಿದೆ.   
ಕುರಿ ಹಿಕ್ಕಿ ಗೊಬ್ಬರದಿಂದ ಲಕ್ಷ ರೂ. ಲಾಭ 
ಪ್ರತಿ ತಿಂಗಳು ಕುರಿ ಹಿಕ್ಕಿ ಗೊಬ್ಬರ ಮಾರಾಟದಿಂದಲೇ 1 ಲಕ್ಷ ರೂ. ಆದಾಯ ಬರುತ್ತಿದೆ. 20 ಟ್ರಾೃಕ್ಟರ್‌ನಷ್ಟು ಗೊಬ್ಬರ ಮಾರಾಟ ಮಾಡಲಾಗುತ್ತಿದೆ. 1 ಟ್ರಾೃಕ್ಟರ್ ಗೊಬ್ಬರಕ್ಕೆ 5 ಸಾವಿರ ರೂ. ದರ ಇದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಸಾಗರ ಭಾಗದ ಅಡಿಕೆ ಮತ್ತು ತೆಂಗು ಬೆಳೆಗಾರರು ಇಲ್ಲಿಗೇ ವಾಹನ ತೆಗೆದುಕೊಂಡು ಬಂದು ಗೊಬ್ಬರ ತೆಗೆದುಕೊಂಡು ಹೋಗುತ್ತಾರೆ. 
ಔಷಧೋಪಚಾರ: 
ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಕುರಿಗಳಿಗೆ ಜಂತು ಹುಳು ಔಷಧ ನೀಡಲಾಗುವುದು. ಕರುಳು ಬೇನೆ, ಬಾಯಿ ಬೇನೆ, ನೀಲಿ ನಾಲಿಗೆ ರೋಗ, ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ವರ್ಷದಲ್ಲಿ 4 ಬಾರಿ ವ್ಯಾಕ್ಸಿನ್ ನೀಡಲಾಗುವುದು.
ಮೇವು ಬೆಳೆ ಬೀಜೋತ್ಪಾದನೆ:
ಧಾರವಾಡದಲ್ಲಿರುವ ಭಾರತೀಯ ಹುಲ್ಲುಗಾವಲು ಸಂಸ್ಥೆಯಿಂದ (ಐಜಿಎಫ್‌ಆರ್‌ಐ) ಕುದುರೆ ಮೆಂತ್ಯ, ಬಹುವಾರ್ಷಿಕ ಮೇವಿನ ಜೋಳ ಹಾಗೂ ಬೇಲಿ ಮೆಂತ್ಯಗಳ ಬೀಜದ ಪ್ಯಾಕೆಟ್‌ಗಳನ್ನು ತಲಾ ಒಂದು ಕೆಜಿಯಂತೆ ಖರೀದಿಸಲಾಗಿತ್ತು. ತಮಗೆ ಸಾಕಾಗುಷ್ಟು ಮೇವು ಇಟ್ಟುಕೊಂಡು, ಇನ್ನುಳಿದ ಮೇವನ್ನು ಬೀಜವಾಗುವವರೆಗೆ ಬೆಳೆಸಿ, ಅದೇ ಬೀಜಗಳನ್ನು ಮರಳಿ ಹುಲ್ಲುಗಾವಲು ಸಂಸ್ಥೆಗೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ರೈತ ಮಂಜುನಾಥ.
ಮಳೆ ನೀರು ಕೊಯ್ಲು: 
ಕುರಿ ಸಾಕಾಣಿಕೆಯ ಶೆಡ್ ಮೇಲೆ ಬೀಳುವ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ, ಬೋರ್‌ವೆಲ್ ಇರುವ ಕಡೆ ಮಳೆ ನೀರು ಕೋಯ್ಲು ಮಾಡಲಾಗುತ್ತಿದೆ. ಸೋಲಾರ್ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಸೌರ ವಿದ್ಯುತ್‌ನಿಂದಲೇ ಕುರಿ ಶೆಡ್‌ಗೆ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ.  
ದೇಸಿ ಹಸು, ಕೋಳಿ ಸಾಕಣೆ: 
ಐವತ್ತು ಜವಾರಿ ಕೋಳಿಗಳಿದ್ದು, ಪ್ರತಿದಿನ 20ರಿಂದ 25 ಮೊಟ್ಟೆ ಸಿಗುತ್ತವೆ, ಒಂದಕ್ಕೆ 20 ರೂ. ನಂತೆ ಮಾರಾಟ ಮಾಡಲಾಗುವುದು. ದೇಸಿ ಹಸು ತಳಿ ಸಂರಕ್ಷಣೆ ಉದ್ದೇಶದಿಂದ 5 ಜವಾರಿ ಆಕಳು ಸಾಕಾಣಿಕೆ ಮಾಡಲಾಗಿದೆ. ಇವುಗಳ ಸೆಗಣಿಯಿಂದ ಜೀವಾಮೃತ ತಯಾರಿಸಿ ಹೊಲಗಳಿಗೆ ಹಾಕಲಾಗುತ್ತಿದೆ. 
6 ಬಗೆಯ ಮೇವು:
4 ಎಕರೆಯಲ್ಲಿ ಕುರಿಗಳಿಗಾಗಿ ಸೂಪರ್ ನೇಪಿಯರ್, ಸಿಒಎಫ್ -31 ಬಹುವಾರ್ಷಿಕ ಮೇವಿನ ಜೋಳ, ಕುದುರೆ ಮೆಂತ್ಯ, ಬೇಲಿ ಮೆಂತ್ಯ, ಮೇವಿನ ಅಲಸದಂದೆ ಹಾಗೂ ಗೋವಿನಜೋಳ ಸೇರಿದಂತೆ 6 ಬಗೆಯ ಮೇವು ಬೆಳೆಯಲಾಗುತ್ತದೆ. ಹಸಿ ಮೇವನ್ನು ಯಂತ್ರದ ಮೂಲಕ 1 ಇಂಚಿನಷ್ಟು ಕಟಾವು ಮಾಡಿ ದಿನಕ್ಕೆ 5 ಬಾರಿ ಹಾಗೂ ಬೆಳಗ್ಗೆ ಒಂದು ಬಾರಿ ಹೊಟ್ಟು, ಮೇವನ್ನು ಕುರಿಗಳಿಗೆ ಆಹಾರವಾಗಿ ನೀಡಲಾಗುತ್ತದೆ. 
ಆವಿಷ್ಕಾರಿ ರೈತ ಪ್ರಶಸ್ತಿ 
ಕೃಷಿ ಇಲಾಖೆ 2025ರಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಮತ್ತು 25 ಸಾವಿರ ನಗದು ಬಹುಮಾನ ನೀಡಿದೆ. 2026ರಲ್ಲಿ ಧಾರವಾಡ ಕೃಷಿ ವಿವಿ ಆವಿಷ್ಕಾರಿ ಸಾಧಕ ರೈತ ಪ್ರಶಸ್ತಿ ನೀಡಿ ಗೌರವಿಸಿದೆ.
ಹೋಮಕ್ಕೆ ಆಕಳ ಸೆಗಣಿ ಬೆರಣಿ
ಹೋಮಕ್ಕೆ ಜವಾರಿ ಆಕಳ ಸೆಗಣಿಯಿಂದ ಬೆರಣಿ ತಯಾರಿಸಿ ಕೊಡುವಂತೆ ಗ್ರಾಹಕರಿಂದ ಬೇಡಿಕೆ ಬಂದಿದೆ. 1 ಬೆರಣಿಗೆ 5 ರೂ.  ನೀಡಿ ಖರೀದಿಸುವದಾಗಿ ಗ್ರಾಹಕರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಕಳ ಸೆಗಣಿಯಿಂದ ಬೆರಣಿ (ಕುಳ್ಳು) ಮಾಡಿ ಮಾರಾಟ ಮಾಡುವ ಯೋಜನೆ ಇದೆ. 
"

ಯುವ ಜನರು ತಮ್ಮ ಓದು ಮುಗಿದ ಬಳಿಕ ಖಾಸಗಿ ಅಥವಾ ಸರ್ಕಾರಿ ನೌಕರಿ ಸಿಗಲಿ ಎಂದು ಕಾಯುವ ಬದಲು ಕೃಷಿ ಜತೆಗೆ ಉಪಕಸುಬುಗಳಾದ ಜೇನು ಸಾಕಾಣಿಕೆ, ಕುರಿ, ಕೋಳಿ, ಮೀನು ಸಾಕಣೆ, ಹೈನುಗಾರಿಕೆ ಮಾಡಬೇಕು. ಇದರಿಂದ ಆರ್ಥಿಕವಾಗಿ ಸದೃಢರಾಗಬಹುದು.
ಮಂಜುನಾಥ ಕಾಲವಾಡಕುರಿ ಸಾಕಾಣಿಕೆ ಮಾಡಿದ ರೈತ, ಮೊರಬ

"

ಮೊರಬ ಗ್ರಾಮದ ಯುವ ರೈತ ಮಂಜುನಾಥ ಕಲಾವಾಡ ಅವರಿಗೆ ಕುರಿ ಸಾಕಾಣಿಕೆಗೆ ನಬಾರ್ಡ್‌ನಿಂದ ಸಾಲ ಸೌಲಭ್ಯ ನೀಡಲಾಗಿದೆ. ಯುವಕರು ಶ್ರಮವಹಿಸಿ ದುಡಿದರೆ ಯಶಸ್ಸು ಗಳಿಸುವುದು ಸಾಧ್ಯ ಎಂಬುದಕ್ಕೆ ಮಂಜುನಾಥ ಕಾಲವಾಡ ಸಾಕ್ಷಿ. ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಮಾದರಿ ರೈತರಾಗಿದ್ದಾರೆ.
ಮಯೂರ ಕಾಂಬಳೆಉಪ ಮಹಾಪ್ರಬಂಧಕ ನಬಾರ್ಡ್ ಧಾರವಾಡ



"

ಇಡೀ ಜಗತ್ತಿನಲ್ಲಿ ಕೃಷಿಗೆ ಯೋಗ್ಯ ಭೂಮಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯ ಇರುವುದು ಭಾರತದಲ್ಲಿ, ಇದು ನಿಸರ್ಗ ಮತ್ತು ದೇವರ ಕೊಡುಗೆ. ಜಗತ್ತಿನಲ್ಲಿ 68 ನಮೂನೆಯ ಮಣ್ಣುಗಳ ಮಾದರಿಗಳಿದ್ದು, ಅದರಲ್ಲಿ 45 ಬಗೆಯ ಮಣ್ಣು ಭಾರತದಲ್ಲಿದೆ. ದೇಶದ ಯುವಕರು ಆಸಕ್ತಿಯಿಂದ ಕೃಷಿ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಜತೆಗೆ ಉಪಕಸುಬುಗಳು ಕೂಡ ಲಾಭದಾಯಕವಾಗಿವೆ.
ಡಾ. ಚಿದಾನಂದ ಮನಸೂರವಿಶ್ರಾಂತ ಡೀನ್, ವ್ಯವಸ್ಥಾಪನ ಮಂಡಳಿ ಸದಸ್ಯರು, ಕೃಷಿ ವಿವಿ ಧಾರವಾಡ