ಹುಬ್ಬಳ್ಳಿ ತಾಲೂಕಿನ ಕುರಡಿಕೇರಿ ಗ್ರಾಮದ ರೈತ ಕಲ್ಲಪ್ಪ ಅವರು ಟ್ಯೊಮ್ಯಾಟೊ ಬೆಳೆದಿರುವುದು.
ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಹುಬ್ಬಳ್ಳಿ ತಾಲೂಕಿನ ಕುರಡಿಕೇರಿ ಗ್ರಾಮದ ಯುವ ರೈತ ಒಂದು ಎಕರೆ ಹೊಲದಲ್ಲಿ ಕಳೆದ ವರ್ಷ ವಿವಿಧ ತರಕಾರಿ ಬೆಳೆ ಬೆಳೆದು ಆರು ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸಿದ್ದಾರೆ.
ಗ್ರಾಮದ ಕಲ್ಲಪ್ಪ ಶಂಕ್ರಪ್ಪ ಗುಮ್ಮಗೋಳ ಅವರದು ನಾಲ್ಕು ಎಕರೆ ಜಮೀನಿದ್ದು, ಹೊಲದಲ್ಲಿ ಒಂದು ಬೋರ್‌ವೆಲ್ ಇದೆ. ಅದೇ ನೀರು ಬಳಸಿ ಎಕರೆ ಹೊಲದಲ್ಲಿ ಪ್ಲಾಸ್ಟಿಕ್ ಹೊದಿಕೆಯ ಮಲ್ಚಿಂಗ್ ನಿರ್ಮಿಸಿ, ಹನಿ ನೀರಾವರಿ ಪದ್ಧತಿಯಡಿ ಹಸಿ ಮೆಣಸಿನಕಾಯಿ, ಟ್ಯೊಮಾಟೊ, ಸೌತೆಕಾಯಿ, ಹಾಗಲಕಾಯಿ, ಹಿರೇಕಾಯಿ ಬೆಳೆಯನ್ನು ಸಮೃದ್ಧವಾಗಿ ಬೆಳೆದಿದ್ದಾರೆ.
ಹಸಿಮೆಣಸಿನಕಾಯಿ ಬಂಪರ್ ಬೆಳೆ:
2025ರ ಏಪ್ರಿಲ್‌ನಲ್ಲಿ ನರ್ಸರಿಯೊಂದರಿಂದ 1ರೂ.ಗೆ ಒಂದರಂತೆ ಹಸಿಮೆಣಸಿನಕಾಯಿ 10 ಸಾವಿರ ಸಸಿಗಳನ್ನು ತಂದು ಜಿಗ್‌ಜಾಗ್ ಮಾದರಿಯಲ್ಲಿ ನಾಟಿ ಮಾಡಿದರು. 3 ತಿಂಗಳ ಬಳಿಕ ಒಟ್ಟು 5 ಟನ್ ಇಳುವರಿ ಬಂದಿದ್ದು, 2.50 ಲಕ್ಷ ರೂ. ಆದಾಯವಾಗಿದೆ.
ಹಾಗಲಕಾಯಿ 1.20 ಲಕ್ಷ ರೂ. ಲಾಭ:
ಮೆಣಸಿನಕಾಯಿ ಫಸಲು ತೆಗೆದ ಬಳಿಕ 13 ಗುಂಟೆ ಜಾಗದಲ್ಲಿ ಹಾಗಲಕಾಯಿ ಬೆಳೆದಿದ್ದು, 2,600 ಕೆಜಿ ಫಸಲು ಬಂದಿದ್ದು, 1.20 ಲಕ್ಷ ರೂ. ಲಾಭವಾಗಿದೆ.
2025ರ ಅಕ್ಟೋಬರ್‌ನಲ್ಲಿ 13 ಗುಂಟೆ ಜಾಗದಲ್ಲಿ ಹಿರೇಕಾಯಿ ಬೆಳೆದಿದ್ದು, 3,650 ಕೆಜಿ ಇಳುವರಿ ಬಂದಿದ್ದು, 1.80 ಲಕ್ಷ ರೂ. ಆದಾಯವಾಗಿದೆ. ಜತೆಗೆ 5 ಗುಂಟೆಯಲ್ಲಿ ಟ್ಯೊಮ್ಯಾಟೊ ಬೆಳೆದಿದ್ದು, 2 ಸಾವಿರ ಕೆಜಿ ಫಸಲು ಬಂದಿದ್ದು, 50 ಸಾವಿರ ರೂ. ಲಾಭವಾಗಿದೆ. ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಎಲ್ಲ ತರಕಾರಿ ಮಾರಾಟ ಮಾಡುತ್ತೇವೆ. 1 ಲಕ್ಷ ರೂ. ಖರ್ಚು ಕಳೆದು 5 ಲಕ್ಷ ರೂ. ನಿವ್ವಳ ಲಾಭವಾಗಿದೆ ಎನ್ನುತ್ತಾರೆ ರೈತ ಕಲ್ಲಪ್ಪ ಗುಮ್ಮಗೋಳ.
20 ಎಕರೆ ಲಾವಣಿ: ಸ್ವಂತ 4 ಎಕರೆ ಜಮೀನಿನ ಜತೆಗೆ ಕಲ್ಲಪ್ಪ ಅವರು ಬೇರೆಯವರ 20 ಎಕರೆ ಜಮೀನನ್ನು ಲಾವಣಿ (ಬಾಡಿಗೆ) ಪಡೆದು ಸೋಯಾಬೀನ್ ಮತ್ತು ಗೋವಿನಜೋಳ ಬೆಳೆದಿದ್ದು, ಆ ಬೆಳೆಯಲ್ಲಿ ಕೂಡ ಉತ್ತಮ ಆದಾಯವಾಗಿದೆ.
ತೋಟಗಾರಿಕೆ ಇಲಾಖೆಯಿಂದ ರೈತ ಕಲ್ಲಪ್ಪ ಅವರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿ 2024-25ನೇ ಸಾಲಿನಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್‌ಗೆ 36 ಸಾವಿರ ರೂ., ಸಂರಕ್ಷಿತ ಬೇಸಾಯ ಯೋಜನೆಯಡಿ 16 ಸಾವಿರ ರೂ., ಹೈಬ್ರಿಡ್ ತರಕಾರಿ ಹೊಸ ಪ್ರದೇಶಗಳ ವಿಸ್ತೀರ್ಣ ಕಾರ್ಯಕ್ರಮದಡಿ 19,200 ರೂ. ಸಹಾಯಧನ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ಎರಡು ಎಕರೆಯಲ್ಲಿ ತರಕಾರಿ
ಕಳೆದ ವರ್ಷ 1 ಎಕೆರಯಲ್ಲಿ ತರಕಾರಿ ಬೆಳೆಯಲಾಗಿತ್ತು. ಈ ವರ್ಷ 2 ಎಕರೆಯಲ್ಲಿ ಬೆಳೆಯಲು ತಯಾರಿ ನಡೆದಿದೆ. ಹೊಸ ಮಲ್ಚಿಂಗ್ ಅಳವಡಿಸಲಾಗಿದ್ದು, ಏಪ್ರಿಲ್ 3ನೇ ವಾರದಲ್ಲಿ ಜಿ-4 ತಳಿಯ ಮೆಣಸಿನಕಾಯಿ 15 ಸಾವಿರ ಸಸಿಗಳನ್ನು ಒಂದೂವರೆ ಎಕರೆಯಲ್ಲಿ ನಾಟಿ ಮಾಡಲಾಗುವುದು. 10 ಗುಂಟೆಯಲ್ಲಿ 2,500 ಟೊಮಾಟೊ ಸಸಿ, 10 ಗುಂಟೆಯಲ್ಲಿ ಬದನೆಕಾಯಿ 2,000 ಸಸಿ ನಾಟಿ ಮಾಡಲಾಗುವುದು. ಇವೆಲ್ಲ ಎರಡೂವರೆಯಿಂದ 3 ತಿಂಗಳಿಗೆ ಫಸಲು ಬರುತ್ತವೆ. ಅಕ್ಟೋಬರ್‌ನಲ್ಲಿ ಇದೇ ಜಾಗದಲ್ಲಿ ಹಾಗಲಕಾಯಿ ಮತ್ತು ಹಿರೇಕಾಯಿ ಬೆಳೆಯಲಾಗುವುದು. ಕಳೆದ ವರ್ಷ 1 ಎಕರೆಯಲ್ಲಿ 6 ಲಕ್ಷ ರೂ.ಗೂ ಹೆಚ್ಚು ಆದಾಯ ದೊರೆತಿದ್ದು, ಈ ಬಾರಿ 2 ಎಕರೆಯಲ್ಲಿ ತರಕಾರಿ ಬೆಳೆಯಿಂದ 12 ಲಕ್ಷ ರೂ. ಆದಾಯ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಕಲ್ಲಪ್ಪ ಗುಮ್ಮಗೋಳ.
"
ಬೇರೆ ಬೆಳೆಗಿಂತ ತರಕಾರಿ ಬೆಳೆಯಿಂದ ನಿರಂತರವಾಗಿ ಹಣ ಬರುತ್ತದೆ ಎಂಬ ಕಾರಣಕ್ಕೆ ಕಳೆದ ವರ್ಷ ತರಕಾರಿ ಬೆಳೆಯಲು ಮುಂದಾದೇವು. ಅದರಿಂದ ನಮಗೆ ಒಳ್ಳೆಯ ಲಾಭವೇ ಆಗಿದೆ. ಈ ವರ್ಷ 2 ಎಕರೆಯಲ್ಲಿ ತರಕಾರಿ ಬೆಳೆಯಲು ತಯಾರಿ ನಡೆದಿದೆ.
ಕಲ್ಲಪ್ಪ ಗುಮ್ಮಗೋಳತರಕಾರಿ ಬೆಳೆಗಾರ, ಕುರಡಿಕೇರಿ
"
ರೈತ ಕಲ್ಲಪ್ಪ ಗುಮ್ಮಗೋಳ ಅವರು ಒಂದು ಎಕರೆಯಲ್ಲಿ ಹಸಿ ಮೆಣಸಿನಕಾಯಿ, ಟ್ಯೊಮ್ಯಾಟೊ, ಹಾಗಲಕಾಯಿ, ಹಿರೇಕಾಯಿ , ಸೌತೆಕಾಯಿ ಸೇರಿ ವಿವಿಧ ಬೆಳೆ ಬೆಳೆದಿದ್ದಾರೆ. ಇತರ ರೈತರು ಕೂಡ ಇಲಾಖೆಯ ಸಹಾಯಧನ ಪಡೆದು ತರಕಾರಿ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ಆಸಕ್ತರಿಗೆ ಅಗತ್ಯ ಮಾಹಿತಿ ನೀಡಲಾಗುವುದು. ಶ್ರೀಕಾಂತ ಮನೋಹರಸಹಾಯಕ ತೋಟಗಾರಿಕೆ ಅಧಿಕಾರಿ, ಛಬ್ಬಿ ರೈತ ಸಂಪರ್ಕ ಕೇಂದ್ರ