ಕುಂದಗೋಳ ತಾಲೂಕಿನ ಬು. ತರ್ಲಘಟ್ಟ ಗ್ರಾಮದ ಶ್ರೀ ಹಾದಿಬಸವೇಶ್ವರ ದೇವಸ್ಥಾನದ ಉದ್ಘಾಟನೆ-ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ಏರ್ಪಡಿಸಿದ್ದ ಧರ್ಮ ಜಾಗೃತಿ ಸಮಾರಂಭವನ್ನು ಮಾಜಿ ಶಾಸಕ ಎಂ.ಎಸ್. ಅಕ್ಕಿ ಉದ್ಘಾಟಿಸಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು, ಶಿತಿಕಂಠೇಶ್ವರ ಶಿವಾಚಾರ್ಯರು, ರೇವಣಸಿದ್ಧ ಶಿವಾಚಾರ್ಯರು, ಶ್ರೀ ರೇವಣಸಿದ್ಧ ಶಿವಾಚಾರ್ಯರು, ಶ್ರೀ ಅಭಿನವ ಬಸವಣ್ಣಜ್ಜನವರು, ಇತರರಿದ್ದರು.
- ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಚನ
- ಬು. ತರ್ಲಘಟ್ಟದಲ್ಲಿ ಧರ್ಮ ಜಾಗೃತಿ ಸಮಾರಂಭ
ಕುಂದಗೋಳ: ಮನುಷ್ಯನಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ. ಮನುಷ್ಯನ ನಡೆ, ನುಡಿಗಳು ಯಾವಾಗಲೂ ಸತ್ಯದ ಪರವಾಗಿರಬೇಕು. ಸಜ್ಜನರಿಗೆ ಬರುವ ಆಪತ್ತು ಮತ್ತು ದುರ್ಜನರಿಗೆ ಬರುವ ಸಂಪತ್ತು ಬಹಳ ದಿನ ಉಳಿಯುವುದಿಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಬು. ತರ್ಲಘಟ್ಟ ಗ್ರಾಮದ ಶ್ರೀ ಹಾದಿಬಸವೇಶ್ವರ ದೇವಸ್ಥಾನದ ಉದ್ಘಾಟನೆ-ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಸತ್ಕಾರ್ಯಗಳಿಂದ ಸಮಾಜಕ್ಕೆ ಬಹು ದೊಡ್ಡ ಶಕ್ತಿ ಪ್ರಾಪ್ತವಾಗುತ್ತದೆ. ವೀರಶೈವ ಧರ್ಮದಲ್ಲಿ ಉದಾತ್ತ ಆದರ್ಶ ಮೌಲ್ಯಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಕೆಲಸ ಮಾಡಲು ಮನಸ್ಸಿದ್ದರೆ ಮಾರ್ಗಗಳು ಕಾಣುತ್ತವೆ. ಮನಸ್ಸಿಲ್ಲದಿದ್ದರೆ ನೆಪಗಳು ಮುಂದೆ ಬರುತ್ತವೆ. ದೀಪ ತನಗಾಗಿ ಉರಿಯುವುದಿಲ್ಲ. ಇತರರ ಯಶಸ್ಸನ್ನು ಕಂಡು ಉರಿಯುವುದಿಲ್ಲ. ಬೆಳಕು ನೀಡುವುದೊಂದೇ ದೀಪದ ಕೆಲಸ. ಸುಳ್ಳಿನ ಜತೆಗೆ ದುಷ್ಟಶಕ್ತಿ ಇದ್ದರೆ ಸತ್ಯದ ಜತೆಗೆ ದೈವಶಕ್ತಿ ಸದಾ ಇರುತ್ತದೆ. ಹುಡುಕುತ್ತ ಹೊರಟ ಧರ್ಮರಾಯನಿಗೆ ಕೆಟ್ಟವರು ಕಾಣಲಿಲ್ಲ. ಎಷ್ಟೇ ಹುಡುಕಿದರೂ ದುರ್ಯೋಧನನಿಗೆ ಒಳ್ಳೆಯವರು ಕಾಣಲಿಲ್ಲ. ನೋಡುವ ದೃಷ್ಟಿ ಬದಲಾದರೆ ಎಲ್ಲವೂ ಸರಿಯಾಗಿ ಕಾಣುತ್ತದೆ. ಬೆವರು ಸುರಿಸಿ ದುಡಿಯದ ಹೊರತು ಯಶಸ್ಸು ಸಿಗುವುದಿಲ್ಲ. ಬು. ತರ್ಲಘಟ್ಟ ಗ್ರಾಮದಲ್ಲಿ ಶ್ರೀ ಹಾದಿಬಸವೇಶ್ವರ ಸುಂದರ ದೇವಸ್ಥಾನ ನಿರ್ಮಿಸಿ ಈಗ ಉದ್ಘಾಟನೆ-ಕಳಸಾರೋಹಣ ಸಮಾರಂಭ ಜರುಗುತ್ತಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ಎಂ.ಎಸ್. ಅಕ್ಕಿ ಮಾತನಾಡಿ, ಅಶಾಂತಿಯಿಂದ ಬಳಲುತ್ತಿರುವ ಮನುಷ್ಯನಿಗೆ ಧರ್ಮದ ಅರಿವು ಆದರ್ಶಗಳ ಪ್ರಜ್ಞೆ ಅವಶ್ಯಕ. ದೇವರು ಧರ್ಮ ಮತ್ತು ಗುರುವಿನಲ್ಲಿ ನಮ್ಮ ನಂಬಿಗೆ ವಿಶ್ವಾಸಗಳು ಗಟ್ಟಿಯಾಗಿರಬೇಕು ಎಂದರು.
ನೇತೃತ್ವ ವಹಿಸಿದ್ದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಲಿಗೆ ರುಚಿ ಬಿಟ್ಟರೆ ಆರೋಗ್ಯಕ್ಕೆ ಒಳ್ಳೆಯದು. ವಾದ, ವಿವಾದಗಳನ್ನು ಬಿಟ್ಟರೆ ಸಂಬಂಧಗಳು ಹೆಚ್ಚು ಬೆಳೆಯುತ್ತವೆ. ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸುತ್ತಾ ಬಂದಿದೆ ಎಂದರು.
ಕುಂದಗೋಳ ಶಿತಿಕಂಠೇಶ್ವರ ಶಿವಾಚಾರ್ಯರು, ಹಣ್ಣಿಕೇರಿ ರೇವಣಸಿದ್ಧ ಶಿವಾಚಾರ್ಯರು, ಹುಬ್ಬಳ್ಳಿ ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯರು, ಕುಂದಗೋಳ ಕಲ್ಯಾಣಮಠದ ಅಭಿನವ ಬಸವಣ್ಣಜ್ಜನವರು ಸಮ್ಮುಖ ವಹಿಸಿದ್ದರು. ತಾಪಂ ಮಾಜಿ ಅಧ್ಯಕ್ಷ ಆರ್.ಜಿ.ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಶಿ ಕೆಎಲ್‌ಇ ಸಂಸ್ಥೆ ಅಧ್ಯಕ್ಷ ಎ.ಬಿ. ಉಪ್ಪಿನ, ಗದಗಿನ ವೀರೇಶ್ ಕೂಗು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು.
ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೀರೇಶ ನಾಗಾವಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.