ಹುಬ್ಬಳ್ಳಿ ಕೆಎಂಸಿಆರ್‌ಐನಲ್ಲಿರುವ ಮಕ್ಕಳ ವಿಭಾಗದ ಪಿಐಸಿಯುನಲ್ಲಿರುವ ಅತ್ಯಾಧುನಿಕ ಚಿಕಿತ್ಸೆ ವ್ಯವಸ್ಥೆ. 
ಧಾರವಾಡ

ನವಜಾತ ಶಿಶುಗಳಿಗೆ ರಕ್ಷಾ ಕವಚ PICU

ಪ್ರಮುಖ ಮುಖ್ಯಾಂಶಗಳು

  • ಕೆಎಂಸಿಆರ್‌ಐ ಪಿಡಿಯಾಟ್ರಿಕ್ಸ್ ವಿಭಾಗದಲ್ಲಿ ಅತ್ಯಾಧುನಿಕ ಸೌಲಭ್ಯ
  • ಬಡವರ ಪಾಲಿನ ಸಂಜೀವಿನಿ
ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಹುಬ್ಬಳ್ಳಿ ಕೆಎಂಸಿಆರ್‌ಐನಲ್ಲಿರುವ ಮಕ್ಕಳ ವಿಭಾಗದಲ್ಲಿ ನವಜಾತ ಶಿಶುಗಳಿಂದ 12 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಚಿಕಿತ್ಸೆ ದೊರೆಯುತ್ತಿದೆ. ಸರ್ಕಾರದ ಅನುದಾನ ಮತ್ತು ಕೆಲ ದಾನಿಗಳು ಮೂಲಸೌಕರ್ಯ ಅಭಿವೃದ್ಧಿಗೆ ಕೈ ಜೋಡಿಸಿದ್ದರಿಂದ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ ಎಂಬಂತೆ ಇಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆ ಸಿಗುತ್ತಿದೆ.
ಇಲ್ಲಿನ 103 ಮತ್ತು 104ನೇ ವಾರ್ಡ್‌ನಲ್ಲಿ ಮಕ್ಕಳ ತೀವ್ರ ನಿಗಾ ಘಟಕ (ಪಿಐಸಿಯು) ಮತ್ತು ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು) ಎರಡು ವಿಭಾಗಗಳಿವೆ. ಪಿಐಸಿಯುನಲ್ಲಿ 22 ಹಾಸಿಗೆಗಳಿದ್ದು, ಇಲ್ಲಿ 1 ತಿಂಗಳಿನಿಂದ 12 ವರ್ಷದೊಳಗಿನ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅದೇ ರೀತಿ ಎನ್‌ಐಸಿಯುನಲ್ಲಿ ಜನಿಸಿದ ಒಂದು ದಿನದಿಂದ 28 ದಿನಗಳೊಳಗಿನ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ. 
ಕೆಎಂಸಿಆರ್‌ಐನಲ್ಲಿ ಜನಿಸಿದ ಮಕ್ಕಳು (ಇನ್ ಬಾರ್ನ್) ವಿಭಾಗದಲ್ಲಿ ಕೃತಕ ಉಸಿರಾಟ ಸೇರಿದಂತೆ ಸಕಲ ಸೌಲಭ್ಯವುಳ್ಳ 65 ಹಾಸಿಗೆ (ಬೆಡ್) ವ್ಯವಸ್ಥೆ ಇದೆ. ಹೊರಗಿನ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗಾಗಿ (ಔಟ್ ಬಾರ್ನ್) 45 ಸೇರಿದಂತೆ ಒಟ್ಟು 110 ಹಾಸಿಗೆಗಳ ವ್ಯವಸ್ಥೆ ಇದೆ. 
ಏನೆಲ್ಲ ಸೌಲಭ್ಯಗಳಿವೆ:
ಪಿಐಸಿಯುನಲ್ಲಿ ಕೊಠಡಿ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಪ್ರತಿ ಬೆಡ್‌ನಲ್ಲಿ ಕೃತಕ ಉಸಿರಾಟ ವ್ಯವಸ್ಥೆ, ಮೊನಿಟರ್, ಡಯಾಲಿಸಿಸ್, ಮಕ್ಕಳಿಗೆ ನಳಿಕೆ ಮೂಲಕ ನೇರವಾಗಿ ಹೊಟ್ಟೆಯೊಳಗೆ ಆಹಾರ ನೀಡುವ ವ್ಯವಸ್ಥೆ ಇದೆ. 
ನಿರಂತರ ನಿಗಾವಹಿಸುವಿಕೆ: 
ಎರಡೂ ವಿಭಾಗಗಳಲ್ಲಿ 17 ಜನ ಶುಶ್ರೂಷಕರಿದ್ದು, 14 ಜನ ಮಕ್ಕಳ ತಜ್ಞ ವೈದ್ಯರು ನಿರಂತರವಾಗಿ ಮೂರು ಪಾಳಿಯಲ್ಲಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸುತ್ತಾರೆ. ಅದೇ ರೀತಿ ಅಗತ್ಯ ಔಷಧಗಳು ಕೂಡ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ.
ಉಸಿರಾಟ ತೊಂದರೆ:
ಇಲ್ಲಿಗೆ ಹೊರಗಿನ ಆಸ್ಪತ್ರೆಗಳಿಂದ ಬರುವ ಹೆಚ್ಚಿನ ಮಕ್ಕಳು ಉಸಿರಾಟ ತೊಂದರೆ (ನ್ಯುಮೋನಿಯಾ), ನರರೋಗ, ಕಾಮಣಿ (ಜಾಂಡೀಸ್), ಕಿಡ್ನಿ ಮತ್ತು ಲೀವರ್ ಫೇಲ್ಯೂರ್ ಆದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತವೆ.
ಆರೋಗ್ಯಕರ ಮಗು: 
ಹೆರಿಗೆ ಆದ ಬಳಿಕ ನವಜಾತ ಶಿಶು ಸಾಮಾನ್ಯವಾಗಿ 2.5 ಕೆಜಿ ಇರಬೇಕು. ಆದರೆ, 6 ರಿಂದ 7 ತಿಂಗಳು ಅವಧಿಗೆ ಜನಿಸಿದ ಶಿಶುಗಳು 1ಕೆಜಿ, 1.4 ಕೆಜಿ, ಕೆಲವೊಮ್ಮೆ 1ಕೆಜಿಗಿಂತ ಕಡಿಮೆ ತೂಕವಿರುವ ಮಕ್ಕಳು ಕೂಡ ಬರುತ್ತವೆ. ಚಿಕಿತ್ಸೆ ಬಳಿಕ ಅಂಥ ಅನೇಕ ಮಕ್ಕಳು ಕೂಡ ಗುಣವಾಗಿವೆ. 
ಎನ್‌ಐಸಿಯು 
ವರ್ಷ -- ದಾಖಲು--ಡಿಸ್ಚಾರ್ಜ್--ಮರಣ
2024--   3679 --   3317 --- 261
2025 --  3247--    2846 --- 306
2026 --  1770 --   1532 --- 238
(ಮೇ 31ರವರೆಗೆ)

ಪಿಐಸಿಯು 

ವರ್ಷ -- ದಾಖಲು --ಡಿಸ್ಚಾರ್ಜ್--ಮರಣ
2024---1401---   1038   --- 193
2025--- 1378---  1077---    208
2026--- 549----   427 ---- 122
(ಮೇ 31ರವರೆಗೆ)
 9828 ಮಕ್ಕಳಿಗೆ ಟ್ರೀಟ್‌ಮೆಂಟ್
2024ರ ಜನವರಿಯಿಂದ 2026ರ ಮೇ 31ರವರೆಗೆ ಅಂದರೆ 2 ವರ್ಷ 5 ತಿಂಗಳಲ್ಲಿ ಮಕ್ಕಳ ವಿಭಾಗದ ಸಾಮಾನ್ಯ ವಾರ್ಡ್‌ಗಳಲ್ಲಿ ಒಟ್ಟು 9828 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ.
"

ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮಕ್ಕಳಿಗೆ ಸಮಗ್ರ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ವಿಶೇಷ ಹೊರರೋಗಿ ಸೇವೆ, ಲಸಿಕಾ ಸೇವೆ ಹಾಗೂ ಪರಿಣತ ಮಕ್ಕಳ ತಜ್ಞರ ತಂಡದ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ.
 ಡಾ. ಕೆ.ಎಫ್. ಕಮ್ಮಾರ ನಿರ್ದೇಶಕರು, ಕೆಎಂಸಿಆರ್‌ಐ ಹುಬ್ಬಳ್ಳಿ

"

ಕೆಎಂಸಿಆರ್‌ಐನಲ್ಲಿರುವ ಮಕ್ಕಳ ವಿಭಾಗದಲ್ಲಿ ನವಜಾತ ಶಿಶುಗಳಿಂದ 12 ವರ್ಷದೊಳಗೊನ ಮಕ್ಕಳಿಗೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ರಾಯಚೂರ, ಬಾಗಲಕೋಟೆ ಜಿಲ್ಲೆಯ ಜನರು ಇಲ್ಲಿಗೆ ಬಂದು ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಡಾ. ಈಶ್ವರ ಹಸಬಿವೈದ್ಯಕೀಯ ಅಧೀಕ್ಷಕರು, ಕೆಎಂಸಿಆರ್‌ಐ ಹುಬ್ಬಳ್ಳಿ


ಮಕ್ಕಳ ಆರೋಗ್ಯವೇ ಕುಟುಂಬ ಮತ್ತು ಸಮಾಜದ ಅಮೂಲ್ಯ ಸಂಪತ್ತು. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಬೇಕು. ಪೌಷ್ಟಿಕ ಆಹಾರ ನೀಡಬೇಕು, ಸ್ವಚ್ಛತೆ ಕಾಪಾಡುವುದು, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕು. ಯಾವುದೇ ಅನಾರೋಗ್ಯದ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಆದಷ್ಟು ಸ್ವಯಂ ಔಷಧೋಪಚಾರದಿಂದ ದೂರವಿರಿ. ವೈದ್ಯರ ಸಲಹೆಯನ್ನು ಪಾಲಿಸಬೇಕು.

 ಡಾ. ವಿನೋದ ರಟಗೇರಿ

ಮಕ್ಕಳ ವಿಭಾಗದ ಮುಖ್ಯಸ್ಥರು ಕೆಎಂಸಿಆರ್‌ಐ ಹುಬ್ಬಳ್ಳಿ