ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಹುಬ್ಬಳ್ಳಿ ನಗರ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಲಬುರಗಿಯ ಹಿರಿಯ ಸಾಹಿತಿ ಡಾ. ಜಯಶ್ರೀ ದಂಡೆ ಉದ್ಘಾಟಿಸಿದರು. ಸ್ನೇಹಾ ಭೂಸನೂರ, ಕೆ.ಎಸ್. ಕೌಜಲಗಿ, ಮಲ್ಲಿಕಾರ್ಜುನ ಸಾವಕಾರ, ಮೀನಾಕ್ಷಿ ವಂಟಮುರಿ, ವಿದ್ಯಾ ವಂಟಮುರಿ, ಗಣಪತಿ ಗಂಗೊಳ್ಳಿ, ಇತರರಿದ್ದರು.  
ಧಾರವಾಡ

sammelan ಸಾಹಿತ್ಯದಲ್ಲಿ ವಿಮರ್ಶೆ, ಸಂಶೋಧನೆ, ಹೊಸತನವಿರಲಿ

ಪ್ರಮುಖ ಮುಖ್ಯಾಂಶಗಳು

  • ಹುಬ್ಬಳ್ಳಿ ನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
  • ಸರ್ವಾಧ್ಯಕ್ಷೆ ಸ್ನೇಹಾ ಭೂಸನೂರ ಅಭಿಪ್ರಾಯ
ಹುಬ್ಬಳ್ಳಿ: ಅಜ್ಞಾನ, ಮೂಢನಂಬಿಕೆ, ಜಾತೀಯತೆ, ಅಮಾನವೀಯ ನಡವಳಿಕೆಯನ್ನು ಸಾಹಿತ್ಯವು ಖಂಡಿಸಬೇಕು. ಅನ್ಯಾದ ವಿರುದ್ಧ ಪ್ರತಿಭಟನೆ, ಬಂಡಾಯದ ಧ್ವನಿ ಎತ್ತಬೇಕು. ಸಾಹಿತ್ಯದಲ್ಲಿ ವಿಮರ್ಶೆ, ಸಂಶೋಧನೆ, ಹೊಸತನಗಳಿರಬೇಕು. ಗುಂಪುಗಾರಿಕೆ ಇರಬಾರದು, ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿ ಸಾಹಿತ್ಯ ಹೊರಬರಬೇಕು ಎಂದು ಹುಬ್ಬಳ್ಳಿ ನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸ್ನೇಹಾ ಭೂಸನೂರ ಹೇಳಿದರು.
ಇಲ್ಲಿನ ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹುಬ್ಬಳ್ಳಿ ನಗರ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಇಂದಿನ ದಿನಗಳಲ್ಲಿ ಯುವ ಸಮೂಹ ವಿಜ್ಞಾನ, ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಆರೋಗ್ಯ, ಆಯುಷ್ಯ ಹಾಳು ಮಾಡಿಕೊಳ್ಳುತ್ತಿದೆ. ಸುಶಿಕ್ಷಿತರು ಅನಾಗರಿಕತೆಯ ದಾರಿ ಹಿಡಿದಿರುವುದು ಖೇದಕರ ಸಂಗತಿ. ಇಂಥ ಅಸಂಸ್ಕೃತ ನಡವಳಿಕೆಗಳ ವಿರುದ್ಧ ನಾವೆಲ್ಲರೂ ಹೋರಾಡೋಣ. ಯುವಕ- ಯುವತಿಯರನ್ನು ಸುಸಂಸ್ಕಾರದ ಗುರಿಯೆಡೆಗೆ ನಡೆಸೋಣ ಎಂದರು.
ಕಲಬುರಗಿಯ ಹಿರಿಯ ಸಾಹಿತಿ ಡಾ. ಜಯಶ್ರೀ ದಂಡೆ ಸಮ್ಮೇಳನ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಸಾವಕಾರ, ಮೀನಾಕ್ಷಿ ವಂಟಮುರಿ, ಹುಬ್ಬಳ್ಳಿ ನಗರ ತಾಲೂಕು ಕಸಾಪ ಅಧ್ಯಕ್ಷೆ ವಿದ್ಯಾ ವಂಟಮುರಿ, ಲತಾ ಉಮರಾಣಿ, ಶಂಕರ ಕೋಳಿವಾಡ, ಚನ್ನಬಸಪ್ಪ ಧಾರವಾಡಶೆಟ್ಟರ್, ಡಾ. ಜೆ.ಬಿ. ಕಲಕೋಟಿ, ಡಾ. ಎಂ.ಜಿ. ಸಜ್ಜನರ, ಗಣಪತಿ ಗಂಗೊಳ್ಳಿ, ಇತರರಿದ್ದರು.
ಬೆಳಗ್ಗೆ ಲಿಂಗರಾಜ ನಗರ (ದಕ್ಷಿಣ) ಸಮುದಾಯ ಭವನದಿಂದ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಮಧ್ಯಾಹ್ನ ಸಮ್ಮೇಳನದ ಅಂಗವಾಗಿ ವಿವಿಧ ಗೋಷ್ಠಿಗಳು ಜರುಗಿದವು. ಸಂಜೆ ಬಹಿರಂಗ ಸಭೆ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಗೋವಿಂದಪ್ಪ ಗೌಡಪ್ಪಗೋಳ ವಹಿಸಿದ್ದರು. ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಇತರರು ಪಾಲ್ಗೊಂಡಿದ್ದರು.
ನಿರ್ಣಯಗಳು:
* ಪ್ರಾಥಮಿಕ ಹಂತದಿಂದ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯ
* ಕೇಂದ್ರ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ
* ಕನ್ನಡ-ಕನ್ನಡಿಗ-ಕರ್ನಾಟಕದ ಅಸ್ಮಿತೆಯನ್ನು ಕಾಪಾಡಲು ಕ್ರಿಯಾತ್ಮಕವಾಗಿ ಕೆಲಸ
* ಹುಬ್ಬಳ್ಳಿಯಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ
ಧ್ವಜಾರೋಹಣ:
ಸಮ್ಮೇಳನ ನಿಮಿತ್ತ ಬೆಳಗ್ಗೆ ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಧ್ವಜಾರೋಹಣವನ್ನು ಡಾ. ಲಿಂಗರಾಜ ಅಂಗಡಿ ನೆರವೇರಿಸಿದರು. ಪರಿಷತ್ತಿನ ಧ್ವಜಾರೋಹಣವನ್ನು ಹುಬ್ಬಳ್ಳಿ ತಾಲೂಕು ಅಧ್ಯಕ್ಷೆ ವಿದ್ಯಾ ವಂಟಮುರಿ ನೆರವೇರಿಸಿದರು. ವಿ.ಜಿ. ಪಾಟೀಲ, ಸದಾಶಿವ ಚೌಶೆಟ್ಟಿ, ಈರಣ್ಣ ಎಮ್ಮಿ, ಈರಣ್ಣ ಕಾಡಪ್ಪನವರ, ನಿರ್ಮಲಾ ಜಳಕಿ, ಡಾ. ಎಂ ಆರ್. ಪಾಟೀಲ, ಡಾ. ಎಚ್.ವಿ. ಬೆಳಗಲಿ, ಆರ್.ಎಂ. ಗೋಗೇರಿ, ಕಟ್ಟಿ ಮಂಗಳಮ್ಮದೇವಿ ಮಹಿಳಾ ಮಂಡಳದ ಸದಸ್ಯೆಯರು, ಲಿಂಗರಾಜ ನಗರದ ಮಹಿಳಾ ಮಂಡಳದ ಸದಸ್ಯೆಯರು, ಪ್ರೋಬಸ್ ಕ್ಲಬ್ ಸದಸ್ಯರು, ಕನ್ನಡ ಸಾಹಿತ್ಯಾಭಿಮಾನಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.