ಹುಬ್ಬಳ್ಳಿ: ಇಲ್ಲಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ದೃಷ್ಟಿ ದಿನದ ಅಂಗವಾಗಿ ಅ. 9ರಂದು ಬೆಳಗ್ಗೆ 10ಕ್ಕೆ ನಗರದ ಇಂದಿರಾ ಗಾಜಿನ ಮನೆಯಲ್ಲಿ ಹುಬ್ಬಳ್ಳಿ ದೃಷ್ಟಿ ಮೇಳ ಆಯೋಜಿಸಲಾಗಿದೆ ಎಂದು ನೇತ್ರ ತಜ್ಞ ಡಾ. ವೆಂಕಟರಾಮ್ ಕಟ್ಟಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ನುರಿತ ವೈದ್ಯರಿಂದ ಉಚಿತ ನೇತ್ರ ತಪಾಸಣೆ ನಡೆಸಲಾಗುವುದು. ಕಣ್ಣಿನ ಪೊರೆ ಇದ್ದರೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗುವುದು ಎಂದರು.
ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ, ಮೇಲ್ಗಣ್ಣು, ಕರಿಗುಡ್ಡೆ ಮೇಲೆ ಬೆಳೆದ ದುರ್ಮಾಂಸ ಇತ್ಯಾದಿ ನೇತ್ರ ಸಂಬಂಧಿ ಕಾಯಿಲೆಗಳಿಗೆ ಉಚಿತ ತಪಾಸಣೆ ಮಾಡಿ ಸಲಹೆ ಸೂಚನೆ ನೀಡಲಾಗುವುದು.
ಸಾರ್ವಜನಿಕರಲ್ಲಿ ಕಣ್ಣಿನ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಕ್ಕಳಿಂದ ನೃತ್ಯ, ಶೈಕ್ಷಣಿಕ ಕಿರುನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಮನೋರಂಜನೆ ಜತೆಗೆ ಶಾಲೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ. ಶಾಲೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.
ಮೊಬೈಲ್ ಫೋನ್ ಅತಿಯಾದ ಬಳಕೆಯಿಂದ ಮಕ್ಕಳಿಗೆ ಬೇಗ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ "ಲವ್ ಯುವರ್ ಐ' ಘೋಷಣೆಯೊಂದಿಗೆ ಹಲವು ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಕಣ್ಣಿನ ಮಾದರಿಯನ್ನು ಪ್ರದರ್ಶನಕ್ಕೆ ಇರಿಸಿ ಮಾಹಿತಿ ನೀಡಲಾಗುವುದು ಎಂದರು.
ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ನಿಯಮಿತವಾಗಿ ಕಣ್ಣು ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಗಂಭೀರ ಸಮಸ್ಯೆಯಿಂದ ದೂರ ಇರಬಹುದು. 40 ವರ್ಷ ದಾಟಿದ ಎಲ್ಲರೂ ಕಡ್ಡಾಯವಾಗಿ ನೇತ್ರ ತಪಾಸಣೆ ಮಾಡಿಸಬೇಕು. ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಆಸ್ಪತ್ರೆ ವತಿಯಿಂದ 11 ದೃಷ್ಟಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಡಾ. ಕಾತ್ಯಾಯಿನಿ ಪಾಟೀಲ, ನವೀನ, ಡಾ. ಅನುಜಾ, ಗೋಷ್ಠಿಯಲ್ಲಿದ್ದರು.