Literary ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ.
- ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾಹಿತಿ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಸಾಹಿತಿ ಸ್ನೇಹಾ ಭೂಸನೂರ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ.
ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು. ಅಂದು ಬೆಳಗ್ಗೆ 9 ಗಂಟೆಗೆ ಲಿಂಗರಾಜ ನಗರ (ದಕ್ಷಿಣ) ಸಮುದಾಯ ಭವನದಿಂದ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
10 ಗಂಟೆಗೆ ಕಲಬುರಗಿಯ ಹಿರಿಯ ಸಾಹಿತಿ ಡಾ. ಜಯಶ್ರೀ ದಂಡೆ ಉದ್ಘಾಟಿಸುವರು. ಸಮ್ಮೇಳನದ ವೇದಿಕೆಗೆ ಪ್ರೊ. ಈ.ವಿ. ಬಿಳೇಕಲ್ಲ ಅವರ ಹೆಸರನ್ನು, ಸಭಾಂಗಣಕ್ಕೆ ಮೊಹರೆ ಹನಮಂತರಾಯ ಹೆಸರು ಇಡಲಾಗುವುದು.
ಮಹಾದ್ವಾರಕ್ಕೆ ಉಣಕಲ್ಲ ಸದ್ಗುರು ಶ್ರೀ ಸಿದ್ದಪ್ಪಜ್ಜ ಅವರ ಹೆಸರಿಡಲಾಗುವುದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಉಪ ಮೇಯರ್ ಸಂತೋಷ ಚವ್ಹಾಣ ಪುಸ್ತಕ ಬಿಡುಗಡೆಗೊಳಿಸುವರು.
ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮೀನಾಕ್ಷಿ ವಂಟಮುರಿ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಮ್ಮೇಳನದ ಅಂಗವಾಗಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.
ಸಂಜೆ 4.30ಕ್ಕೆ ಬಹಿರಂಗ ಸಭೆ ನಡೆಯಲಿದೆ. ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಾಣಿಜ್ಯ ತೆರಿಗೆ ಇಲಾಖೆಯ ಗೋವಿಂದಪ್ಪ ಗೌಡಪ್ಪಗೋಳ ವಹಿಸುವರು.
ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಇತರರು ಪಾಲ್ಗೊಳ್ಳುವರು. ನಂತರ ಸಮ್ಮೇಳನದ ನಿರ್ಣಯಗಳನ್ನು ಕೈಗೊಳ್ಳಲಾಗುವುದು.
ತಾಲೂಕು ಸಮ್ಮೇಳನದ ನಂತರ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸುವ ಉದ್ದೇಶ ಇದೆ ಎಂದರು.
ಸರ್ಕಾರದಿಂದ ಅನುದಾನ ಇಲ್ಲ: ಈ ಮೊದಲು ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಪ್ರತಿ ವರ್ಷ 1 ಲಕ್ಷ ರೂ. ಅನುದಾನ ನೀಡುತ್ತಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಸರ್ಕಾರದಿಂದ ಯಾವುದೇ ಅನುದಾನ ದೊರಕುತ್ತಿಲ್ಲ ಎಂದು ಡಾ. ಲಿಂಗರಾಜ ಅಂಗಡಿ ಖೇದ ವ್ಯಕ್ತಪಡಿಸಿದರು.
ಸಮ್ಮೇಳನಕ್ಕೆ ಮಹಾನಗರ ಪಾಲಿಕೆ 50 ಸಾವಿರ ರೂ. ಅನುದಾನ ನೀಡುವ ಭರವಸೆ ನೀಡಿದೆ. ಇನ್ನುಳಿದ ಹಣವನ್ನು ಕೆಲ ಸಾಹಿತಿಗಳು ನೀಡಿದ್ದು, ಸುಮಾರು ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದರು.
ಸಮ್ಮೇಳನದಲ್ಲಿ ಕೈಗೊಳ್ಳುವ ಬಹುತೇಕ ನಿರ್ಣಯಗಳನ್ನು ಸರ್ಕಾರ ಈಡೇರಿಸುತ್ತಿಲ್ಲ. ಧಾರವಾಡದಲ್ಲಿರುವ ಸಾಹಿತ್ಯ ಭವನಕ್ಕೆ ಪ್ರತಿ ತಿಂಗಳು 10 ಸಾವಿರ ರೂ. ವೆಚ್ಚ ಇದೆ. ಅದನ್ನೆಲ್ಲ ಪದಾಧಿಕಾರಿಗಳೇ ನಿರ್ವಹಿಸುತ್ತಿದ್ದೇವೆ.
ಜಿಲ್ಲಾ ಸಾಹಿತ್ಯ ಸಮ್ಮೇಳನದ ನಂತರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನ ಸಾಂಕೇತಿಕ ಧರಣಿ ಕೈಗೊಳ್ಳಲಾಗುವುದು. ಕಸಾಪ ಅಧ್ಯಕ್ಷರಾಗಿ ಮಹೇಶ ಜೋಶಿ ಅಧಿಕಾರ ವಹಿಸಿಕೊಂಡ ನಂತರ ಸಾಹಿತ್ಯ ಪರಿಷತ್ ಮತ್ತಷ್ಟು ಸಮಸ್ಯೆ ಎದುರಿಸುತ್ತಿದೆ ಎಂದರು.
ಹುಬ್ಬಳ್ಳಿ ನಗರ ತಾಲೂಕು ಕಸಾಪ ಅಧ್ಯಕ್ಷೆ ವಿದ್ಯಾ ವಂಟಮುರಿ, ಶರಣಪ್ಪ ಕೊಟಗಿ, ಚನ್ನಬಸಪ್ಪ ಧಾರವಾಡಶೆಟ್ರು ಸುದ್ದಿಗೋಷ್ಠಿಯಲ್ಲಿ ಇದ್ದರು.