ಹುಬ್ಬಳ್ಳಿ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ -ಅಡಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಕೇಶವ ಯಾದವ ಮಾತನಾಡಿದರು.ಡಾ. ಡಿ.ಟಿ. ಪಾಟೀಲ, ಈರಪ್ಪ ಗರಗ, ಮಂಜುನಾಥ ಚಟ್ನಿ, ಗಿರೀಶ ವಿರೂಪಾಕ್ಷರ ಇದ್ದರು.
ಹುಬ್ಬಳ್ಳಿ: ತಾಲೂಕಿನ ಮಾವನೂರ ಗ್ರಾಮದ ಡಾ. ಡಿ.ಟಿ. ಪಾಟೀಲ ಅವರ ಅಡಕೆ ತೋಟದಲ್ಲಿ ಜ. 19ರಂದು ಬೆಳಗ್ಗೆ 11 ಗಂಟೆಗೆ ಹಳೇ ಧಾರವಾಡ ಜಿಲ್ಲಾ (ಧಾರವಾಡ, ಗದಗ, ಹಾವೇರಿ) ಅಡಕೆ ಬೆಳೆಗಾರರ ಸಂಘದ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಕೇಶವ ಯಾದವ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅಡಕೆ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಬೆಳೆಗಾರರಿಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇವುಗಳ ನಿವಾರಣೆ ಮತ್ತು ಬೆಳೆ ಅಭಿವೃದ್ಧಿ ಪಡಿಸಲು ಹಣಕಾಸಿನ ನೆರವಿನ ಅಗತ್ಯವಿದೆ. ಸರ್ಕಾರದಿಂದ ಸೌಲಭ್ಯ ಪಡೆಯಲು ಸಂಘ ಸ್ಥಾಪಿಸಲಾಗಿದ್ದು, 2025ರ ಅ. 25ರಂದು ಕಾನೂನುಬದ್ಧವಾಗಿ ನೋಂದಾಯಿಸಲಾಗಿದೆ. ಆಸಕ್ತ ಬೆಳೆಗಾರರು ಸಂಘದ ಸದಸ್ಯತ್ವ ಪಡೆಯಬಹುದು ಎಂದರು.
ಸಂಘದ ಅಧ್ಯಕ್ಷ ಡಾ. ಡಿ.ಟಿ. ಪಾಟೀಲ ಮಾತನಾಡಿ, ಉದ್ಘಾಟನೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ ಉದ್ಘಾಟಿಸುವರು. ಡಾ. ಡಿ.ಟಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೃಷಿ ವಿವಿ ವಿಶ್ರಾಂತ ಕುಲಪತಿ ವಿಠ್ಲ ಬೆಣಗಿ, ಬಿ.ಆರ್. ಗಿರೀಶ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಜಿತಕುಮಾರ ಮಶಾಲಿ, ಮಾಣಿಕ್ಯ ಚಿಲ್ಲೂರ, ಬಿ.ಎ. ಪಾಟೀಲ ಪಾಲ್ಗೊಳ್ಳುವರು ಎಂದರು.
ಈರಪ್ಪ ಗರಗ, ಮಂಜುನಾಥ ಚಟ್ನಿ, ಗಿರೀಶ ವಿರೂಪಾಕ್ಷರ ಇದ್ದರು.