ಹುಬ್ಬಳ್ಳಿ ತಾಲೂಕಿನ ಮಾವನೂರಲ್ಲಿ ಸೋಮವಾರ ಏರ್ಪಡಿಸಿದ್ದ ಹಳೇ ಧಾರವಾಡ ಜಿಲ್ಲಾ ಅಡಕೆ ಬೆಳೆಗಾರರ ಸಂಘದ ಉದ್ಘಾಟನೆ ಸಮಾರಂಭವನ್ನು ಧಾರವಾಡ ಕೃಷಿ ವಿವಿ ನಿವೃತ್ತ ಕುಲಪತಿ ವಿ.ಐ. ಬೆಣಗಿ ಉದ್ಘಾಟಿಸಿದರು. ಡಾ. ಡಿ.ಟಿ. ಪಾಟೀಲ, ಶ್ರೀ ಬಸವಲಿಂಗ ಸ್ವಾಮೀಜಿ, ಕಾಶಿನಾಥ ಭದ್ರಣ್ಣವರ, ಬಿ.ಆರ್. ಗಿರೀಶ, ಮಂಜುನಾಥ ಚಟ್ನಿ, ಮಹೇಶ ಬೆಳಗಾಂವಕರ, ಸುಮಾ ಮಂಜುನಾಥ ಚಟ್ನಿ, ಮಾಣಿಕ್ಯ ಚಿಲ್ಲೂರ, ಇದ್ದರು.
- ಕೃಷಿ ವಿವಿ ನಿವೃತ್ತ ಕುಲಪತಿ ವಿ.ಐ. ಬೆಣಗಿ ಹೇಳಿಕೆ
- ಅಡಕೆ ಬೆಳೆಗಾರರ ಸಂಘ ಉದ್ಘಾಟನೆ
ಹುಬ್ಬಳ್ಳಿ: ರೈತರು ಅಡಕೆ areca ಬೆಳೆಯುವ ಮುನ್ನ ಮಣ್ಣು ಪರೀಕ್ಷೆ ಮಾಡಿಸಬೇಕು. ಮಣ್ಣಿನ ರಸಸಾರ 5.2ರಿಂದ 7.2ರವರೆಗ ಇರಬೇಕು. ಮಣ್ಣಿನಲ್ಲಿ ಸಾವಯವ ಇಂಗಾಲ 0.75ಕ್ಕಿಂತ ಹೆಚ್ಚಿಗೆ ಇರಬೇಕು. ಇವೆಲ್ಲ ಸರಿಯಾಗಿದ್ದರೆ ಬೆಳೆ ಮತ್ತು ಇಳುವರಿ ಉತ್ತಮವಾಗಿ ಬರುತ್ತದೆ ಎಂದು ಧಾರವಾಡ ಕೃಷಿ ವಿವಿ ನಿವೃತ್ತ ಕುಲಪತಿ ವಿ.ಐ. ಬೆಣಗಿ ಹೇಳಿದರು.
ತಾಲೂಕಿನ ಮಾವನೂರ ಗ್ರಾಮದ ಪ್ರಗತಿಪರ ರೈತ ಡಾ. ಡಿ.ಟಿ. ಪಾಟೀಲ ಅವರ ತೋಟದಲ್ಲಿ ಸೋಮವಾರ ಏರ್ಪಡಿಸಿದ್ದ ಹಳೇ ಧಾರವಾಡ ಜಿಲ್ಲಾ ಅಡಕೆ ಬೆಳೆಗಾರರ ಸಂಘ ಉದ್ಘಾಟಿಸಿ ಮಾತನಾಡಿದರು.
ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ಕೃಷಿ ಕಾರ್ಯ ಎಲ್ಲದಕ್ಕಿಂತ ಮಿಗಿಲು. ತಾನು ಬೆಳೆದ ಬೆಳೆಗೆ ತಾನೇ ದರ ನಿರ್ಧರಿಸುವ ದಿನಗಳು ಬರಬೇಕು. ಅಂದಾಗ ಕೃಷಿಯಲ್ಲಿ ಲಾಭ ಕಂಡುಕೊಳ್ಳಬಹುದು ಎಂದರು.
ಸಂಘದ ಅಧ್ಯಕ್ಷ ಡಾ. ಡಿ.ಟಿ. ಪಾಟೀಲ ಮಾತನಾಡಿ, ಅಡಕೆ ಬೆಳೆಯಲು ಸರ್ಕಾರದ ಆರ್ಥಿಕ ಸೌಲಭ್ಯ, ಮಿಶ್ರ ಬೆಳೆಗೆ ಸಹಾಯಧನ, ನೀರಾವರಿಗೆ ಸೌಲಭ್ಯ ಪಡೆಯಲು ಬೆಳೆಗಾರರೆಲ್ಲ ಒಟ್ಟಾಗಿ ಹೋದರೆ ಯಶಸ್ಸು ಸಿಗಲಿದೆ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ, ಧಾರವಾಡ ಹೊರತುಪಡಿಸಿ ಬೇರೆಡೆಯ ಅಡಕೆ ಬೆಳೆಗಾರರಿಗೆ ಸರ್ಕಾರದ ಸೌಲಭ್ಯ, ಸಹಾಯಧನ ಸಿಗುತ್ತಿಲ್ಲ. ಅಡಕೆ ಬೆಳೆಗಾರರು, ವಿಜ್ಞಾನಿಗಳ ಜತೆ ಚರ್ಚಿಸಿ ಮಣ್ಣು, ಹವಾಮಾನ ಸೂಕ್ತವಿದ್ದರೆ ಇನ್ನುಳಿದ ತಾಲೂಕಿನ ರೈತರಿಗೆ ಸೌಲಭ್ಯ ಕೊಡಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಕರ್ನಾಟಕ ಸಾಂಬಾರ ಪದಾರ್ಥ ಅಭಿವೃದ್ಧಿ ಮಂಡಳಿ ನಿರ್ದೇಶಕ ಬಿ.ಆರ್. ಗಿರೀಶ ಮಾತನಾಡಿ, ಅಡಕೆ ಬೆಳೆ ಮಧ್ಯೆ ಮಿಶ್ರ ಬೆಳೆಯಾಗಿ ಸಾಂಬಾರು ಬೆಳೆ ಬೆಳೆಯಲು ಮಂಡಳಿಯಿಂದ ಅಗತ್ಯ ಸೌಲಭ್ಯ, ಸಹಾಯಧನ ನೀಡಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಕೇಶವ ಯಾದವ ಮಾತನಾಡಿ, ಅಡಕೆ ಬೆಳೆಯಲು ಹಳೇ ಧಾರವಾಡ ಜಿಲ್ಲೆಯ ಮಣ್ಣು ಮತ್ತು ಹವಾಮಾನ ಸೂಕ್ತ ಇದೆ. 25 ವರ್ಷಗಳಿಂದ ಅಡಕೆ ಬೆಳೆಯಲಾಗುತ್ತಿದ್ದು, ಉತ್ತಮ ಇಳುವರಿ ಬರುತ್ತಿದೆ. ಸರ್ಕಾರ ತಾರತಮ್ಯ ಮಾಡದೇ ಎಲ್ಲ ರೈತರಿಗೂ ಸಹಾಯಧನ, ಸೌಲಭ್ಯ ನೀಡಬೇಕು ಎಂದರು.
ಸಂಘದ ನಿರ್ದೇಶಕರಾದ ಈರಪ್ಪ ಗರಗ, ಮಂಜುನಾಥ ಚಟ್ನಿ, ಮಹೇಶ ಬೆಳಗಾಂವಕರ, ಗಿರೀಶ ವಿರುಪಾಕ್ಷರ, ಶಂಕರ ಸಂಶಿ, ಮಂಜುನಾಥ ಮಣ್ಣೂರ, ದೇವರಾಜ ಪಾಟೀಲ, ನಾಗರಾಜ ಗಂಜಿಗಟ್ಟಿ, ಅಜೀತಕುಮಾರ ಮಶಾಲಿ, ಮಾಣಿಕ್ಯ ಚಿಲ್ಲೂರ, ಬಿ.ಎ. ಪಾಟೀಲ, ಬಸವರಾಜ ಯಕಲಾಸಪುರ, ಬಾಳು ಪಾಟೀಲ, ಅಪ್ಪುಗೌಡ, ಸಿದ್ದನಗೌಡ ಪಾಟೀಲ, ಗದಗ, ಹಾವೇರಿ ಜಿಲ್ಲೆಯ ನೂರಾರು ಅಡಕೆ ಬೆಳೆಗಾರರು ಇದ್ದರು. ಸುಮಾ ಮಂಜುನಾಥ ಚಟ್ನಿ ಕಾರ್ಯಕ್ರಮ ನಿರ್ವಹಿಸಿದರು.