Hip replacement ಶತಾಯುಷಿ ಇಮಾಮಸಾಬ್​ ಅವರೊಂದಿಗೆ ಡಾ. ಭಾಸ್ಕರರಾವ್​. 
ಧಾರವಾಡ

Hip replacement ಶತಾಯುಷಿಗೆ ಹಿಪ್​ ರಿಪ್ಲೇಸ್​ ಶಸ್ತ್ರಚಿಕಿತ್ಸೆ

ಪ್ರಮುಖ ಮುಖ್ಯಾಂಶಗಳು

  • ಹುಬ್ಬಳ್ಳಿ ವೈದ್ಯ ಡಾ. ಭಾಸ್ಕರರಾವ್​ ಸಾಧನೆ
ಹುಬ್ಬಳ್ಳಿ: Hip replacement ವಯೋವೃದ್ಧ, 101 ವರ್ಷದ ವ್ಯಕ್ತಿಯೊಬ್ಬರಿಗೆ ಯಶಸ್ವಿ ಸೊಂಟ ಕೀಲು (ಹಿಪ್​ ಜಾಯಿಂಟ್​) ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನಗರದ ವೈದ್ಯ ಡಾ. ಭಾಸ್ಕರರಾವ್​ ಅವರು ವೈದ್ಯಲೋಕದ ಗಮನ ಸೆಳೆದಿದ್ದಾರೆ.
ಅತ್ಯಂತ ಅಪರೂಪ ಹಾಗೂ ಅಸಾಧ್ಯ ಎನ್ನಬಹುದಾದ ಹಿರಿಯ ಜೀವಕ್ಕೆ ಇಂತಹ ಚಿಕಿತ್ಸೆ ಮಾಡಿ ಮತ್ತೆ ಅವರು ನಡೆದಾಡುವಂತೆ ಮಾಡಿದ್ದು, ಕುಟುಂಬ ವರ್ಗದ ಸಂತಸಕ್ಕೆ ಕಾರಣವಾಗಿದ್ದಾರೆ.
ರೋಗಿಯ ಸ್ಥಿತಿ ಹಾಗೂ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಬಗೆ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಲಬು ಕೀಲು ತಜ್ಞ ಡಾ. ಭಾಸ್ಕರರಾವ್​ ಅವರು, ಮನೆಯಲ್ಲಿ ವಾಕಿಂಗ್​ ಮಾಡುವಾಗ ಜಾರಿ ಬಿದ್ದಿದ್ದ ಶಿಗ್ಗಾಂವಿ ತಾಲೂಕಿನ ಬೆಂಡಿಗೇರಿಯ ನಿವೃತ್ತ ಶಿಕ್ಷಕ, ಶತಾಯುಷಿ ಇಮಾಮಸಾಬ್​ ಬೋವಾಜಿ ಅವರನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಅವರನ್ನು ಪರೀಕ್ಷಿಸಿದಾಗ ಹಿಪ್​ ಜಾಯಿಂಟ್​ (ಸೊಂಟದ ಕೀಲು) ಮುರಿದಿರುವುದು ಪತ್ತೆ ಆಯಿತು. ಶಸ್ತ್ರ ಚಿಕಿತ್ಸೆ ಮಾಡದೇ ಸರಿ ಮಾಡುವುದು ಅಸಾಧ್ಯವಾಗಿತ್ತು. ಆದರೆ, ವಯಸ್ಸಿನ ಕಾರಣಕ್ಕೆ ಆಪರೇಶನ್​ ಕ್ಲಿಷ್ಟಕರ ಹಾಗೂ ಹೈ ರಿಸ್ಕ್​ ಇತ್ತು. ಆದರೂ, ರೋಗಿ ಹಾಗೂ ಕುಟುಂಬದವರ ಒಪ್ಪಿಗೆ ಮೇರೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.
ಅತ್ಯಂತ ಅಪರೂಪದ ಹಾಗೂ ಸಂಕೀರ್ಣವಾಗಿದ್ದ ಹಿಪ್​ ರಿಪ್ಲೇಸ್​ಮೆಂಟ್​ (ಎಡಭಾಗ) ಯಶಸ್ವಿಯಾಗಿ ಮಾಡಲಾಗಿದೆ. 40 ನಿಮಿಷದಲ್ಲಿ ಆಪರೇಶನ್​ ಮಾಡಿದ್ದು, ಮಾರನೇ ದಿನದಿಂದ ರೋಗಿ ಎಂದಿನಂತೆ ನಡೆಯುತ್ತಿದ್ದಾರೆ. ಇದುವರೆಗೂ 800ಕ್ಕೂ ಹೆಚ್ಚು ಆಪರೇಶನ್​ ಮಾಡಿರುವ ತಮಗೆ ಇದು ವಯಸ್ಸಿನ ಕಾರಣಕ್ಕೆ ವಿಶೇಷವಾಗಿದೆ ಎಂದು ಡಾ. ಭಾಸ್ಕರರಾವ್​ ತಿಳಿಸಿದರು.