ಹುಬ್ಬಳ್ಳಿಯ ನವನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್ ಹಿಂದೂ (hindu) ಸಮಾವೇಶವನ್ನು ಶ್ರೀ ಸದಾಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. 
ಧಾರವಾಡ

(hindu) ಹಿಂದೂಗಳ ಒಗ್ಗಟ್ಟಿನಿಂದ ಕ್ಷುದ್ರ ಶಕ್ತಿಗೆ ತಡೆ

ಮರಿದೇವ ಹೂಗಾರ
ಹುಬ್ಬಳ್ಳಿ: ಭಾರತವನ್ನು ಇಬ್ಭಾಗ, ಮತಾಂತರ ಮಾಡಲು ಬಹಳಷ್ಟು ಕ್ಷುದ್ರ ಶಕ್ತಿಗಳು ಕೈಜೋಡಿಸುತ್ತಿವೆ. ಹಿಂದೂಗಳು (hindu) ಒಗ್ಗಟ್ಟಿನಿಂದ ಇದ್ದರೆ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅಭಿಪ್ರಾಯಪಟ್ಟರು.
ನವನಗರ, ಗಾಮನಗಟ್ಟಿ, ಅಮರಗೋಳ, ಸುತಗಟ್ಟಿ, ರಾಯಾಪೂರ ಹಿಂದೂ ಸಮ್ಮೇಳನ ಸಮಿತಿಯಿಂದ ಇಲ್ಲಿಯ ನವನಗರದ ಹಳೇ ಕೆಎಚ್‌ಬಿ ಕಾಲನಿ ಹತ್ತಿರದ ಬಜರಂಗಿ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್ ಹಿಂದೂ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಭಾರತವನ್ನು ಮುಸ್ಲಿಮರು, ಬ್ರಿಟಿಷರು ಸೇರಿದಂತೆ ಬಹಳಷ್ಟು ಜನರು ಆಳ್ವಿಕೆ ಮಾಡಿದರು. ಆದರೆ, ಭಾರತವನ್ನು ಗೆಲ್ಲಲು ಸಾಧ್ಯವಿಲ್ಲವೆಂದರಿತು, ನಮ್ಮ ಮಧ್ಯೆ ಇರುವ ಕುತಂತ್ರಿಗಳ ಸಹಾಯ ಪಡೆದು ಸುದೀರ್ಘ ಆಳ್ವಿಕೆ ಮಾಡಿದರು. ಹಾಗಾಗಿ ನಾವೆಲ್ಲ ಹಿಂದೂಗಳು ಒಂದಾಗಿದ್ದರೆ, ಯಾವ ಶಕ್ತಿಗಳೂ ನಮ್ಮನ್ನು ಸದೆ ಬಡೆಯಲು ಸಾಧ್ಯವಿಲ್ಲ ಎಂದರು.
ಭಾರತ ಪುಣ್ಯ ಭೂಮಿ. ಸಾಕ್ಷಾತ್ ಭಗವಂತನೇ ಜನ್ಮ ತಾಳಿದ ದೇವಭೂಮಿ. ಇಲ್ಲಿ ಮತ್ತೊಮ್ಮೆ ಜನಿಸಬೇಕೆಂದು ಬಹಳಷ್ಟು ಜನರ ಬಯಕೆ. ಇಡೀ ವಿಶ್ವವೇ ಸುಖವಾಗಿರಬೇಕು ಎಂದು ಬಯಸುವ ಜನರು ಹಿಂದೂಗಳು. ಸುಸಂಸ್ಕೃತ, ಜ್ಞಾನವನ್ನು ಜಗತ್ತಿಗೆ ಕೊಟ್ಟವರು ನಾವು. ಇಂಥ ರಾಷ್ಟ್ರ ಉಳಿಸಲು ಹಿಂದೂಗಳೆಲ್ಲ ಜಾತಿ-ಭೇದ ಮರೆತು ಒಂದಾಗಬೇಕು ಎಂದು ಕರೆಯಿತ್ತರು.
ಗದಗ ಶ್ರೀ ಶಿವಾನಂದ ಬೃಹನ್ಮಠದ ಶ್ರೀ ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನ ಸಂಸ್ಕೃತಿ ಕಲಿಸಿದವರು ನಮ್ಮ ಹಿರಿಯರು. ನಾವು ಇವುಗಳನ್ನು ಈಗ ಮರೆಯುತ್ತಿದ್ದೇವೆ. ಊಟ ಮಾಡುವುದು, ನೀರು ಕುಡಿಯುವುದರ ಬಗ್ಗೆ ಅರಿವು, ಆಚಾರಗಳು ಮರೆಯಾಗುತ್ತಿವೆ. ವಿಶ್ವದ ವಿವಿಧ ದೇಶಗಳಲ್ಲಿ ಮತಗಳು, ಪಂಥಗಳು, ಸಂಪ್ರಾದಯಗಳು ಜನಿಸಿವೆ. ಧರ್ಮ ಭಾರತದಲ್ಲಿ ಜನಿಸಿದೆ. ನಮ್ಮದು ಧರ್ಮ ಭೂಮಿ. ಇದಕ್ಕೆ ಸಂಸ್ಥಾಪಕರು ಇಲ್ಲ. ಹಿಂದೂ ಧರ್ಮದಲ್ಲಿ ಶ್ರೇಷ್ಠ ಜೀವನ ವಿಧಾನ ರೂಪಿಸಿ ಕೊಟ್ಟಿದ್ದಾರೆ. ಹಿಂದೂ ಧರ್ಮ ಅಮೂಲ್ಯವಾದದು ಎಂದು ಬಣ್ಣಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಎಂ. ಮಠ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ಸ್ವಾಮಿ ಮಹಾಜನಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಪ್ರಮುಖರಾದ ಸುಭಾಷಸಿಂಗ್ ಜಮಾದಾರ, ಜಯತೀರ್ಥ ಕಟ್ಟಿ, ನರೇಂದ್ರ ಕುಲಕರ್ಣಿ, ಬಸವರಾಜ ಕುಂದಗೋಳಮಠ ಸೇರಿದಂತೆ ಬಹಳಷ್ಟು ಜನರು ಭಾಗವಹಿಸಿದ್ದರು.