hindu arthik ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ನಲ್ಲಿ ಶನಿವಾರ ಏರ್ಪಡಿಸಿದ್ದ ಹಿಂದೂ ಆರ್ಥಿಕ ಮಹಾಸಂಗಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಶ್ರೀ ಸ್ವಾಮಿ ವಿಗ್ಯಾನಾನಂದಜೀ, ಲಿಂಗರಾಜ ಪಾಟೀಲ, ವಿಜೇಶ್ ಸೈಗಲ್, ಗೌತಮ ಬಾಫಣಾ ಇದ್ದರು.
- ಮಾಜಿ ಸಿಎಂ ಬೊಮ್ಮಾಯಿ ಅಭಿಮತ
- ಹಿಂದೂ ಆರ್ಥಿಕ ಮಹಾಸಂಗಮ ಸಮಾರೋಪ
ಹುಬ್ಬಳ್ಳಿ: hindu arthik ಜಗತ್ತಿನಲ್ಲಿ ಎಲ್ಲ ಧರ್ಮಿಯರಿಗೂ ಅವರದೇ ಆದ ಜಾಗ ಇದೆ. ಭಾರತ ಮಾತ್ರ ಸನಾತನ ಧರ್ಮದ ತಾಣವಾಗಿದೆ. ಎಷ್ಟೇ ದಾಳಿಗಳಾದರೂ ಇದು ಗಟ್ಟಿಯಾಗಿ ಬೇರೂರಿದೆ. ಇದಕ್ಕೆ ಮುಖ್ಯ ಕಾರಣ ಧರ್ಮದೊಂದಿಗೆ ಕೂಡಿದ ಅರ್ಥ, ಸತ್ಕಾರ್ಯ, ಸತ್ಯ ಸಾಧನೆಗಳಾಗಿವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಇಲ್ಲಿಯ ಡೆನಿಸನ್ಸ್ ಹೋಟೆಲ್ನಲ್ಲಿ ಹಿಂದೂ ಎಕನಾಮಿಕ್ ಫೋರಂ, ಎಚ್ ಇಎಫ್ ಹುಬ್ಬಳ್ಳಿ ಧಾರವಾಡ ಶಾಖೆ ವತಿಯಿಂದ ವಿಜಯಾನಂದ ಟ್ರಾವೆಲ್ಸ್ ಟೈಟಲ್ ಸ್ಪಾನ್ಸರ್ ಅಡಿಯಲ್ಲಿ ಶನಿವಾರ ಏರ್ಪಡಿಸಿದ್ದ ಹಿಂದೂ ಆರ್ಥಿಕ ಮಹಾಸಂಗಮ ಎರಡನೇ ದಿನದ ಸಮಾವೇಶದಲ್ಲಿ ಅವರು ಮಾತನಾಡಿದರು.
ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ ಎಂಬ ಪುರುಷಾರ್ಥಗಳನ್ನು ಭಾರತೀಯರು ಪಾಲಿಸುತ್ತಾರೆ. ಹಿಂದೂಗಳು ಇಂದಿನ ಜ್ಞಾನಯುಗದಲ್ಲಿ ಸ್ಪರ್ಧೆಯನ್ನು ಅರಿತುಕೊಂಡು ಮುಂದೆ ಸಾಗಬೇಕಿದೆ. ಭಾರತವು ಅತಿದೊಡ್ಡ ಮಾರುಕಟ್ಟೆಯಾಗಿದೆ. ಹೆಚ್ಚಿನ ಗ್ರಾಹಕರು ಇಲ್ಲಿದ್ದಾರೆ. ಇದನ್ನು ಉತ್ಪಾದಕತೆ ಆಧಾರಿತ ಸಮಾಜವಾಗಿ ಪರಿವರ್ತಿಸಬೇಕಾಗಿದೆ ಎಂದರು.
ಸಶಕ್ತ ಭಾರತವೇ ಪ್ರಧಾನಿ ಮೋದಿ ಅವರ ಕನಸಾಗಿದೆ. ಪ್ರತಿಯೊಬ್ಬ ಹಿಂದೂ ಉದ್ಯಮಶೀಲ ಮನಸು ಹೊಂದಿ ಅದರಂತೆ ಮುಂದಡಿ ಇಟ್ಟರೆ ತಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಒಂದು ಟ್ರಕ್ನಿಂದ ದಿಗ್ಗಜ ಕಂಪನಿ ಕಟ್ಟಿದ ಡಾ. ವಿಜಯ ಸಂಕೇಶ್ವರ ಹಾಗೂ ಕುಟುಂಬವು ಉದ್ಯಮ ಕಟ್ಟುವವರಿಗೆ ಮಾದರಿಯಾಗಿದೆ. ಅದೇ ರೀತಿ ಭರತ ಖಿಮಜಿ, ಮೆಳ್ಳಿಗೇರಿ, ನಿರಾಣಿ ಹೀಗೆ ಅನೇಕರು ಈ ಭಾಗದ ಸ್ಪೂರ್ತಿದಾಯಕ ಉದ್ಯಮಿಗಳು ಎಂದರು.
ಸಮೃದ್ಧ ಸಮಾಜ
ಎಚ್ ಇಎಫ್ ಜಂಟಿ ಪ್ರಧಾನ ಕಾರ್ಯದರ್ಶಿ ಶ್ರೀ ಸ್ವಾಮಿ ವಿಗ್ಯಾನಾನಂದಜೀ ಮಾತನಾಡಿ, ಹಿಂದೂ ಸಮಾಜವನ್ನು ಸಮೃದ್ಧಗೊಳಿಸುವುದು ಫೋರಂನ ಉದ್ದೇಶ. ಸ್ವಾತಂತ್ರ್ಯ ನಂತರ ಹಂತಹಂತವಾಗಿ ಭಾರತ ಬೆಳೆಯುತ್ತ ಬಂದಿದೆ. ಜ್ಞಾನವನ್ನು ಆರ್ಥಿಕ ಪ್ರಗತಿಗೆ ಬಳಸಿಕೊಂಡು ಗ್ರಾಮ ಮಟ್ಟದಿಂದ ಬೆಳವಣಿಗೆ ಸಾಧಿಸಬೇಕಾಗಿದೆ. ಇದಕ್ಕಾಗಿ ಫೋರಂ ಎಲ್ಲ ಕಡೆ ಕೆಲಸ ಮಾಡಲಿದೆ ಎಂದರು.
ಅನುಭವ ಹಂಚಿಕೊಂಡ ಸದಸ್ಯರು
ಹಿಂದೂ ಆರ್ಥಿಕ ಮಹಾಸಂಗಮದಲ್ಲಿ ದೇಶದ ವಿವಿಧ ಕಡೆಗಳಿಂದ ನೂರಾರು ಉದ್ಯಮಶೀಲರು ಪಾಲ್ಗೊಂಡಿದ್ದರು. ಅನೇಕರು ತಮ್ಮ ಔದ್ಯಮಿಕ ಯಶಸ್ಸಿನ ಬಗ್ಗೆ ಅನುಭವ ಹಂಚಿಕೊಂಡರು. ಪುತ್ತೂರು ಶಾಖೆ, ಸುಳ್ಯ, ಕೇರಳದ ಮುಳ್ಳೇರಿಯಾ ಶಾಖೆ, ಮಹಾರಾಷ್ಟ್ರದ ಸಂಭಾಜಿನಗರ, ಈರೋಡ ಶಾಖೆಯ ಪ್ರತಿನಿಧಿಗಳು ತಮ್ಮ ಉದ್ಯಮ, ಯೋಜನೆಗಳನ್ನು ವಿವರಿಸಿದರು.