ಹುಬ್ಬಳ್ಳಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಪ್ರಾದೇಶಿಕ ಕಚೇರಿಯಲ್ಲಿ ಹಿಂದಿ ಭಾಷೆಯ ಕುರಿತು ಜಾಗೃತಿ ಮೂಡಿಸುವುದು, ರಾಜಭಾಷೆಯ ಪ್ರಸಾರ ಹಾಗೂ ಕಚೇರಿ ಕಾರ್ಯಗಳಲ್ಲಿ ಹೆಚ್ಚಿನ ಬಳಕೆ ಉತ್ತೇಜಿಸುವ ಉದ್ದೇಶದಿಂದ ಸೆ. 14ರಿಂದ 29ರ ವರೆಗೆ ಹಿಂದಿ ಪಖ್ವಾಡಾ ಸಂಭ್ರಮದಿಂದ ಆಚರಿಸಲಾಯಿತು.
ಈ ಅವಧಿಯಲ್ಲಿ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಹಿಂದಿ ಪಖ್ವಾಡಾ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಸಿಬ್ಬಂದಿ ತಮ್ಮ ಸೃಜನಶೀಲತೆ, ಭಾಷಾ ಪಟುತ್ವ ಹಾಗೂ ಪ್ರತಿಭೆ ಪ್ರದರ್ಶಿಸಿದರು. ಉತ್ತಮ ಸಾಧನೆ ಮಾಡಿದವರಿಗೆ ಸಮಾರೋಪದಲ್ಲಿ ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ಅತಿಥಿಯಾಗಿದ್ದ ಅಪರ ಕೇಂದ್ರ ಭವಿಷ್ಯ ನಿಧಿ ಆಯುಕ್ತ ಜಯ ಕುಮಾರ್, ಹಿಂದಿ ಹೆಚ್ಚಿನ ಹಾಗೂ ಸಹಜ ಬಳಕೆಗೆ ಒತ್ತು ನೀಡಬೇಕು. ರಾಜಭಾಷೆ ಹಿಂದಿಯ ಬಳಕೆ ಪಖ್ವಾಡಾಕ್ಕೆ ಸೀಮಿತವಾಗದೆ ನಿಯಮಿತ ಕಚೇರಿ ಕಾರ್ಯವಿಧಾನದ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ನೀಲಾಂಜನ ಗುಪ್ತಾ ಮಾತನಾಡಿ, ಹಿಂದಿ ಭಾಷೆಯ ಮಹತ್ವ ವಿವರಿಸಿದರು. ರಾಜಭಾಷೆಯ ಪರಿಣಾಮಕಾರಿ ಅನುಷ್ಠಾನವು ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮೂಹಿಕ ಪ್ರಯತ್ನಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಹುಬ್ಬಳ್ಳಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಡಾ. ನಂದರಾಮ್ ಮೀನಾ ಹಾಗೂ ಶಶಿ ಕುಮಾರ್, ಸಹಾಯಕ ಭವಿಷ್ಯ ನಿಧಿ ಆಯುಕ್ತರಾದ ಅಕ್ಷಯ ವಾಘ್, ಶುಭಮ್ ಮೀನಾ, ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕಿರಿಯ ಅನುವಾದ ಅಧಿಕಾರಿ ಆಶೀಷ್ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.