hduda president ರಾಬರ್ಟ್​ ದದ್ದಾಪುರಿ. 
ಧಾರವಾಡ

hduda president ಹುಡಾ ಅಧ್ಯಕ್ಷರಾಗಿ ದದ್ದಾಪುರಿ ಅಧಿಕಾರ ಸ್ವೀಕಾರ

ಪ್ರಮುಖ ಮುಖ್ಯಾಂಶಗಳು

  • ಅವಳಿನಗರ ಪಾರ್ಕಿಂಗ್​ ವ್ಯವಸ್ಥೆ ಸುಧಾರಣೆಗೆ ಆದ್ಯತೆ
  • ಹೊಸ ವಸತಿ ಬಡಾವಣೆ ನಿರ್ಮಾಣಕ್ಕೆ ಕ್ರಮ
ಹುಬ್ಬಳ್ಳಿ: hduda president ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷರಾಗಿ ಕಾಂಗ್ರೆಸ್​ ಹಿರಿಯ ಮುಖಂಡ ರಾಬರ್ಟ್​ ದದ್ದಾಪುರಿ ಅವರು ಶನಿವಾರ ಇಲ್ಲಿಯ ನವನಗರದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಶಾಸಕರು, ಕಾಂಗ್ರೆಸ್​ ನಾಯಕರು, ಪಾಲಿಕೆ ಸದಸ್ಯರು, ಅಭಿಮಾನಿಗಳು, ಡೆವಲಪರ್​ಗಳು ಸೇರಿ ನೂರಾರು ಜನರು ಕಚೇರಿಗೆ ಆಗಮಿಸಿ ದದ್ದಾಪುರಿ ಅವರಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಬರ್ಟ್​ ದದ್ದಾಪುರಿ ಅವರು, ಈ ಹಿಂದೆ ಪ್ರಾಧಿಕಾರ ಸದಸ್ಯನಾಗಿ ಕೆಲಸ ಮಾಡಿರುವೆ. ಆಗ ನಗರದಲ್ಲಿ ಹೈಮಾಸ್ಟ್​ ದೀಪ ಅಳವಡಿಕೆ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಅನೇಕ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದೇ ರೀತಿ ಈಗಲೂ ಮಹಾನಗರದ ಅಭಿವೃದ್ಧಿಗೆ ಹಲವು ಕನಸು, ಯೋಜನೆಗಳಿದ್ದು, ಅಧ್ಯಕ್ಷನಾಗಿ ಅವುಗಳ ಸಾಕಾರಕ್ಕೆ ಪ್ರಯತ್ನಿಸುವೆ ಎಂದರು.
ಪಾರ್ಕಿಂಗ್​ ಸಮಸ್ಯೆ: ಅವಳಿನಗರದಲ್ಲಿ ಸದ್ಯ ವಾಹನ ದಟ್ಟಣೆ ವಿಪರೀತವಾಗಿದೆ. ಬಹಳಷ್ಟು ಕಡೆಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಇಲ್ಲದೇ ಸಮಸ್ಯೆಯಾಗುತ್ತಿದೆ. ವಿವಿಧ ಕಡೆಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಲಿದೆ ಎಂದು ರಾಬರ್ಟ್ ​ದದ್ದಾಪುರಿ ತಿಳಿಸಿದರು.
ವಾಣಿಜ್ಯನಗರಿ ಹುಬ್ಬಳ್ಳಿ, ಶೈಕ್ಷಣಿಕ ನಗರ ಧಾರವಾಡ ಎರಡೂ ಅದರದೇ ಆದ ರೀತಿಯಲ್ಲಿ ಬೆಳೆಯಬೇಕು. ಇದಕ್ಕಾಗಿ ಯೋಜನೆ ರೂಪಿಸಲಾಗುವುದು ಎಂದರು.
ಅವಳಿನಗರದಲ್ಲಿ ಅಕ್ರಮ ಬಡಾವಣೆಗಳ ಹಾವಳಿ ಹೆಚ್ಚಾಗಿದೆ. ಇವುಗಳನ್ನು ತೆರವು ಮಾಡುವ ಬದಲು ಕಾನೂನು ಚೌಕಟ್ಟಿನಲ್ಲಿ ಸಕ್ರಮ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದ ವಸತಿ ರಹಿತರಿಗೆ ನಿವೇಶನ, ಮನೆ ನೀಡಬಹುದಾಗಿದೆ. ಸಕ್ರಮ ಲೇಔಟ್​ ನಿರ್ಮಿಸಿ ಅಗತ್ಯ ಸವಲತ್ತುಗಳನ್ನು ಒದಗಿಸುವತ್ತ ಗಮನ ಹರಿಸಲಾಗುವುದು ಎಂದರು.
ಬಹಳಷ್ಟು ಅಕ್ರಮ ಲೇಔಟ್​ಗಳಲ್ಲಿ ಸರಿಯಾದ ರಸ್ತೆ ಬಿಟ್ಟಿರುವುದಿಲ್ಲ, ಪಾರ್ಕ್​ ಇರುವುದಿಲ್ಲ. ಹಾಗಾಗಿ ಈ ಎಲ್ಲ ಸೌಲಭ್ಯಗಳನ್ನು ಕಾನೂನು ಬದ್ಧವಾಗಿ ಒದಗಿಸಿ ಸಕ್ರಮ ಮಾಡಲಾಗುವುದು. ಅಲ್ಲದೇ ರೈತರೊಂದಿಗೆ ಮಾತುಕತೆ ನಡೆಸಿ ಹೊಸ ವಸತಿ ಬಡಾವಣೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ನಗರದಲ್ಲಿ ಸುಮಾರು 300 ಎಕರೆಯಷ್ಟು ಜಾಗ ನೀಡಲು ಕೆಲವರು ಮುಂದೆ ಬಂದಿದ್ದಾರೆ. ಅವರೊಂದಿಗೆ 50:50 ಅನುಪಾತದ ಯೋಜನೆಯಡಿ ವಸತಿ ಯೋಜನೆ ರೂಪಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಅಗತ್ಯ ದಾಖಲೆ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.