ನವಲಗುಂದ ಹಿರೇಮಠದ ಗುರು ಪಟ್ಟಾಧಿಕಾರ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಶಿರಹಟ್ಟಿಯ ಶ್ರೀಫಕಿರಸಿದ್ದರಾಮ ಸ್ವಾಮೀಜಿ ಅವರನ್ನು ಶ್ರೀಮಠದ ಪರವಾಗಿ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಮತ್ತಿತರರು ಸತ್ಕರಿಸಿದರು. ಶ್ರೀ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ನವಲಗುಂದ
ಅಧ್ಯಾತ್ಮದಲ್ಲಿ ಗುರು ಕಾರುಣ್ಯದಿಂದ ಬೆಳಗುವ ಶಿಷ್ಯ ಪರಂಪರೆಯಿಂದಲೇ ಧರ್ಮ ರಕ್ಷಣೆಗೆ ದಾರಿದೀಪವಾಗಿದ್ದು, ಶಿಷ್ಯ ಪರಂಪರೆಯಿಂದ ಸ್ಥಾಪಿತವಾದ ಮಠಗಳು ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಭಕ್ತ ವೃಂದವನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿವೆ ಎಂದು ಶಿರಹಟ್ಟಿ ಭಾವೈಕ್ಯ ಸಂಸ್ಥಾನ ಮಠದ ಶ್ರೀ ಫಕೀರಸಿದ್ಧರಾಮ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಹಿರೇಮಠದ ಗುರುಪಟ್ಟಾಧಿಕಾರ ಮಹೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸ್ವಾಮೀಜಿಯಾದವರು ತಮ್ಮ ಪೂರ್ವಾಶ್ರಮವನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿ ತಮ್ಮ ಆತ್ಮ ಜ್ಞಾನದ ಮೂಲಕ ಸಮಾಜವನ್ನು ಮುನ್ನಡೆಸುವ ಕಾರ್ಯ ಮಾಡಿದಾಗ ಮಾತ್ರ ಸನ್ಯಾಸತ್ವದ ಸಾತ್ವಿಕತೆಗೆ ಮೆರುಗು ಬರಲು ಸಾಧ್ಯ. ಈ ನಿಟ್ಟಿನಲ್ಲಿ ಇಂದು ಪಂಚ ಪೀಠಾಧಿಕಾರಿಗಳ ಸಮ್ಮುಖದಲ್ಲಿ ಪೀಠಾರೋಹಣ ಮಾಡಿದ ಶ್ರೀ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯರು ಭಕ್ತಿ ಮಾರ್ಗದೊಂದಿಗೆ ಸಮಾಜದಲ್ಲಿ ಧರ್ಮ ಬೋಧನೆ ನಡೆಸಿಕೊಂಡು ಹೋಗಬೇಕೆಂದರು.
ಹಿರೇಮಠದ ನೂತನ ಪೀಠಾಧಿಕಾರಿಗಳಾದ ಶ್ರೀ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೂರ್ವಜನ್ಮದ ಸುಕೃತ ಮತ್ತು ಸಿದ್ಧೇಶ್ವರ ಶಿವಾಚಾರ್ಯರ ಆಶೀರ್ವಾದದಿಂದ ಶ್ರೀಮಠದ ಪಟ್ಟಾಧ್ಯಕ್ಷನಾಗಿರುವೆ. ವೀರಶೈವ ಧರ್ಮ ಪರಂಪರೆಯ ಆದರ್ಶ ಮೌಲ್ಯಗಳ ಸಂರಕ್ಷಣೆ-ಗುರುಸ್ಥಲದ ಮಹತ್ವವನ್ನು ಅರಿತು ಭಕ್ತ ಸಂಕುಲಕ್ಕೆ ಮಾರ್ಗದರ್ಶನ ಮಾಡುವೆ. ಹೊರಗಿನ ಸಿರಿ ಸಂಪತ್ತಿಗಿಂತ ಅಧ್ಯಾತ್ಮ ಸಂಪತ್ತು ದೊಡ್ಡದು. ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಕೃಪಾಶೀರ್ವಾದದಿಂದ ಶ್ರೀಮಠದ ಅಭಿವೃದ್ಧಿ, ಭಕ್ತರಿಗೆ ಸಂಸ್ಕಾರ ಮತ್ತು ಗುಣಾತ್ಮಕ ರಚನಾತ್ಮಕ ಕಾರ್ಯಗಳನ್ನು ಮಾಡುತ್ತೇನೆಂದು ಸಂಕಲ್ಪ ಕೈಕೊಂಡರು.
ಪಟ್ಟಾಧಿಕಾರ ಮಹೋತ್ಸವ ಸ್ವಾಗತಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಕಳೆದ 12 ದಿನಗಳಿಂದ ಪಟ್ಟಣದಲ್ಲಿ ಜರುಗಿದ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ನಿತ್ಯ ಸಾವಿರಾರು ಭಕ್ತರು ಪಾಲ್ಗೊಳ್ಳುವ ಮೂಲಕ ಪೀಠಾಧಿಕಾರ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದು, ಬರುವ ದಿನಗಳಲ್ಲಿ ನೂತನ ಶ್ರೀಗಳ ನೇತೃತ್ವದಲ್ಲಿ ಹಿರೇಮಠವು ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರವಾಗಲಿ ಆಶಿಸಿದರು.
ಪಂಚಗ್ರಹ ಹಿರೇಮಠದ ಹಿರಿಯ ಸ್ವಾಮೀಜಿ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ನರಗುಂದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಕೆ.ಎನ್. ಗಡ್ಡಿ, ಬಿ.ಬಿ. ಗಂಗಾಧಮಠ, ಅಂದಾನಯ್ಯ ಹಿರೇಮಠದ ಗಣ್ಯರಾದ ಅಣ್ಣಪ್ಪ ಬಾಗಿ, ವಿ.ಟಿ. ಕರಿಸಕ್ರಣ್ಣವರ(ಭೋವಿ), ಸಿದ್ದಲಿಂಗಯ್ಯ ಹಿರೇಮಠ, ಪಾಂಡಪ್ಪ ಕೋನರಡ್ಡಿ, ವಿರೇಶ ಕೂಗು, ಬಿ.ಸಿ.ಪೂಜಾರ, ಗಂಗಪ್ಪ ಹಳ್ಳದ, ಯಲ್ಲಪ್ಪ ಭೋವಿ, ಅಪ್ಪಣ್ಣ ಹಳ್ಳದ ಮತ್ತಿತರರು ವೇದಿಕೆ ಮೇಲಿದ್ದರು. ನಂತರ ಹನುಮಂತ ಲಮಾಣಿ ತಂಡದವರಿಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಿದವು. ಎ.ಬಿ. ಕೊಪ್ಪದ ನಿರೂಪಿಸಿದರು. ಆರ್.ಎಸ್. ನೇಗಲಿ ವಂದಿಸಿದರು.