green gram ಹುಬ್ಬಳ್ಳಿಯ ಸಹಕಾರ ಮಾರಾಟ ಮಹಾಮಂಡಳ ಕಚೇರಿ ಎದುರು ಹೆಸರು ಬೆಳೆಗಾರರ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಭಜನೆ ಮಾಡುವ ಮೂಲಕ ಪ್ರತಿಭಟಿಸಿದರು. ವೀರೇಶ ಸೊಬರದಮಠ, ಗುರು ರಾಯನಗೌಡ್ರ, ಮಲ್ಲಣ್ಣ ಆಲೇಕಾರ, ವಿರುಪಾಕ್ಷಪ್ಪ ಪಾಯಣ್ಣವರ, ಪರಮೇಶ್ವರಪ್ಪ ಹಳ್ಯಾಳ, ಅಶೋಕ ಮತ್ತಿಹಳ್ಳಿ, ಇತರರು ಇದ್ದರು.
- ಅಹೋರಾತ್ರಿ ಧರಣಿ ಭಜನೆ
- ಹೆಸರು ಬೆಳೆಗಾರರಿಂದ ಸತ್ಯಾಗ್ರಹ 2ನೇ ದಿನಕ್ಕೆ
ಹುಬ್ಬಳ್ಳಿ: green gram ಇಲ್ಲಿಯ ಹೊಸೂರ ವಿಕಾಸನಗರದಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕಚೇರಿ ಎದುರು ಹೆಸರು ಬೆಳೆಗಾರರು ಆರಂಭಿಸಿರುವ ಅಹೋರಾತ್ರಿ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಬುಧವಾರ ಬೆಳಗ್ಗೆಯಿಂದ ಸಂಗೀತ ಪರಿಕರಗಳೊಂದಿಗೆ ಭಜನೆ ಮಾಡುವ ಮೂಲಕ ವಿಶಿಷ್ಟ ಪ್ರತಿಭಟನೆ ವ್ಯಕ್ತಪಡಿಸಿದರು. ಘೋಷಣೆಗಳನ್ನು ಕೂಗಿ ನ್ಯಾಯಕ್ಕಾಗಿ ಅಂಗಲಾಚಿದರು.
ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಹೆಸರುಕಾಳಿಗೆ ಏಳು ತಿಂಗಳಾದರೂ ರೈತರ ಖಾತೆಗೆ ಹಣ ಜಮೆ ಆಗಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಸತ್ಯಾಗ್ರಹ ಆರಂಭಿಸಿದ್ದಾರೆ. ಬ್ಯಾಹಟ್ಟಿ, ಕುಸುಗಲ್ಲ, ಸುಳ್ಳ, ಕಿರೇಸೂರ, ಅಮರಗೋಳ ಗ್ರಾಮಗಳ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಹೆಸರುಕಾಳು ಉತ್ಪನ್ನ ರೈತರಿಂದ ಖರೀದಿಸಿದ ಒಂದು ತಿಂಗಳ ನಂತರ ಹೆಸರುಕಾಳು ಎಫ್ ಎಕ್ಯೂ ಗುಣಮಟ್ಟವಿಲ್ಲವೆಂದು ತಿರಸ್ಕರಿಸಲಾಗಿತ್ತು. ಇಷ್ಟು ದಿನ ಇಟ್ಟುಕೊಂಡು ಉತ್ಪನ್ನ ವಾಪಸ್ ಕಳಿಸುವುದು ಎಷ್ಟು ಸರಿ? ಎಂದು ರೈತರು ಕಳೆದ ಜನೆವರಿಯಲ್ಲಿಯೇ ಪ್ರತಿಭಟಿಸಿದ್ದರು. ಅಲ್ಲದೇ ಮಾರಾಟ ಮಹಾಮಂಡಳಕ್ಕೆ ವಾಪಸ್ ಹೆಸರುಕಾಳು ಲೋಡ್ಗಳನ್ನು ಕಳುಹಿಸಿದ್ದರು.
ಇದೆಲ್ಲ ಘಟನೆ ನಂತರ ರೈತರಿಗೆ ಬರಬೇಕಾದ ಹಣ ಬಂದಿಲ್ಲ. ಕಳೆದ ಆರು ತಿಂಗಳಿಂದ ಇದಕ್ಕಾಗಿ ಹೋರಾಟ ನಡೆಸಿದ್ದರೂ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ.
ರೈತ ಸೇನಾ ಮುಖ್ಯಸ್ಥ ವೀರೇಶ ಸೊಬರದಮಠ, ರೈತ ಸೇನಾ ವಕ್ತಾರ ಗುರು ರಾಯನಗೌಡ್ರ, ಮುಖಂಡರಾದ ಮಲ್ಲಣ್ಣ ಆಲೇಕಾರ, ವಿರುಪಾಕ್ಷಪ್ಪ ಪಾಯಣ್ಣವರ, ಪರಮೇಶ್ವರಪ್ಪ ಹಳ್ಯಾಳ, ಅಶೋಕ ಮತ್ತಿಹಳ್ಳಿ, ಹೊಳೆಪ್ಪ ಪೂಜಾರ, ಬಸಯ್ಯ ಪೂಜಾರ, ಬಸಣ್ಣ ದ್ಯಾಮಕ್ಕನವರ, ನಾಗರಾಜ ಗಿಡ್ನವರ, ಮೌಲಾಸಾಬ ನವಲೂರ, ಅಲ್ಲಾಭಕ್ಷ ಕವಳಿಕಾಯಿ, ವಿರುಪಾಕ್ಷ ದೊಡ್ಡವಾಡ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.