green gram farmers ಹುಬ್ಬಳ್ಳಿಯ ಸಹಕಾರ ಮಾರಾಟ ಮಹಾಮಂಡಳ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದ ಹೆಸರು ಬೆಳೆಗಾರ ರೈತರು. ವೀರೇಶ ಸೊಬರದಮಠ, ಗುರು ರಾಯನಗೌಡ್ರ, ಮಲ್ಲಣ್ಣ ಆಲೇಕಾರ, ವಿರುಪಾಕ್ಷಪ್ಪ ಪಾಯಣ್ಣವರ, ಪರಮೇಶ್ವರಪ್ಪ ಹಳ್ಯಾಳ, ಅಶೋಕ ಮತ್ತಿಹಳ್ಳಿ, ಇತರರು ಇದ್ದರು.
- ಫೆಡರೇಶನ್ ಎದುರು ಬೆಳೆಗಾರರ ಧರಣಿ
- ಹಣ ಪಾವತಿ ಮಾಡದೇ ಇರುವುದು ಸಮಂಜಸವಲ್ಲ
ಹುಬ್ಬಳ್ಳಿ: green gram farmers ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಹೆಸರುಕಾಳಿಗೆ ಆರೇಳು ತಿಂಗಳಾದರೂ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ರೈತರು ಇಲ್ಲಿಯ ಹೊಸೂರ ವಿಕಾಸನಗರದಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದರು.
ಮಂಗಳವಾರ ಬೆಳಗ್ಗೆ ಮಹಾಮಂಡಳದ ಕಚೇರಿಗೆ ಆಗಮಿಸಿದ ಬ್ಯಾಹಟ್ಟಿ, ಕುಸುಗಲ್ಲ, ಸುಳ್ಳ, ಕಿರೇಸೂರ, ಅಮರಗೋಳ ಸೇರಿ ವಿವಿಧ ಗ್ರಾಮಗಳ ನೂರಾರು ರೈತರು ಪ್ರತಿಭಟನೆ ಆರಂಭಿಸಿದರು.
ಕಳೆದ ಹಂಗಾಮಿನಲ್ಲಿ ಹೆಸರುಕಾಳುಗಳನ್ನು ರೈತರಿಂದ ಬೆಂಬಲ ಬೆಲೆ ಅಡಿ ಪ್ರತಿ ಕ್ವಿಂಟಾಲ್ಗೆ 8768ರೂ.ನಂತೆ ಖರೀದಿಸಲಾಗಿದೆ. ಆದರೆ, ಧಾರವಾಡ ಜಿಲ್ಲೆಯ ಬ್ಯಾಹಟ್ಟಿಯಲ್ಲಿರುವ ಖರೀದಿ ಕೇಂದ್ರದಲ್ಲಿ ಖರೀದಿಸಿದ ಹೆಸರುಕಾಳನ್ನು ಸುಮಾರು ಒಂದು ತಿಂಗಳು ಇಟ್ಟುಕೊಂಡು ವಾಪಸ್ ಕಳಿಸಿದ್ದಾರೆ.
ಕ್ಯೂ ಆರ್ ಕೋಡ್ ದಾಖಲಿಸಿದ 2000 ಚೀಲಗಳನ್ನು (ಸಾವಿರ ಕ್ವಿಂಟಾಲ್) ಬ್ಯಾಹಟ್ಟಿಗೆ ಮರಳಿ ಕಳುಹಿಸಲಾಗಿದೆ. ಇದರಿಂದ ನಿಯಮದಂತೆಯೇ ಹೆಸರು ಖರೀದಿಗೆ ನೀಡಿದ್ದ 94 ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಇದಾದ ಬಳಿಕ ಜಿಲ್ಲಾಧಿಕಾರಿ, ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ವಿಷಯ ತಿಳಿಸಿದಾಗ ಅವರು ಪರಿಶೀಲನೆ ಮಾಡಿದ್ದಾರೆ.
ಕೃಷಿ ಮಾರಾಟ ಇಲಾಖೆ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಕೂಡ ಮಾರಾಟ ಮಹಾಮಂಡಳಕ್ಕೆ ಕಳೆದ ಮೇನಲ್ಲಿಯೇ ಪತ್ರ ಬರೆದು ರೈತರಿಗೆ ಸಿಗಬೇಕಾದ ಹಣ ಪಾವತಿಸಲು ಸೂಚಿಸಲಾಗಿತ್ತು.
ಉತ್ಪನ್ನ ಖರೀದಿಸಿದ ಒಂದು ತಿಂಗಳ ನಂತರ ಹೆಸರುಕಾಳು ಎಫ್ ಎಕ್ಯೂ ಗುಣಮಟ್ಟವಿಲ್ಲವೆಂದು ತಿರಸ್ಕರಿಸುವುದು ರೈತರ ಖಾತೆಗೆ ಹಣ ಪಾವತಿ ಮಾಡದೇ ಇರುವುದು ಸಮಂಜಸವಲ್ಲ ಎಂದು ಇಲಾಖೆ ನಿರ್ದೇಶಕರು ಸಹ ತಿಳಿಸಿದ್ದಾರೆ.
ಇಷ್ಟಿದ್ದರೂ ರೈತರ ಹಣ ಖಾತೆಗೆ ಬಂದಿಲ್ಲ. ಕಳೆದ ಆರು ತಿಂಗಳಿಂದ ಇದಕ್ಕಾಗಿ ಹೋರಾಟ ನಡೆಸಿದ್ದರೂ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಸಮಸ್ಯೆಗೆ ಪರಿಹಾರ ಸಿಗುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ ಎಂದು ರೈತ ಸೇನಾ ವಕ್ತಾರ ಗುರು ರಾಯನಗೌಡ್ರ ತಿಳಿಸಿದ್ದಾರೆ.
ರೈತ ಸೇನಾ ಮುಖ್ಯಸ್ಥ ವೀರೇಶ ಸೊಬರದಮಠ, ಮಲ್ಲಣ್ಣ ಆಲೇಕಾರ, ವಿರುಪಾಕ್ಷಪ್ಪ ಪಾಯಣ್ಣವರ, ಪರಮೇಶ್ವರಪ್ಪ ಹಳ್ಯಾಳ, ಅಶೋಕ ಮತ್ತಿಹಳ್ಳಿ, ಹೊಳೆಪ್ಪ ಪೂಜಾರ, ಬಸಯ್ಯ ಪೂಜಾರ, ಬಸಣ್ಣ ದ್ಯಾಮಕ್ಕನವರ, ನಾಗರಾಜ ಗಿಡ್ನವರ, ಮೌಲಾಸಾಬ ನವಲೂರ, ಅಲ್ಲಾಭಕ್ಷ ಕವಳಿಕಾಯಿ, ವಿರುಪಾಕ್ಷ ದೊಡ್ಡವಾಡ, ಇತರರು ಪ್ರತಿಭಟನೆಯಲ್ಲಿದ್ದರು.