ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ವಿರುದ್ಧ ಆಡಳಿತ ಮಂಡಳಿಯ ಸದಸ್ಯರು ಮಾಡಿದ್ದ ಆರೋಪಗಳ ತನಿಖೆಗೆ ಸಮಿತಿ ರಚಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಕುಲಪತಿಯವರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ವಿಷಯ ತಜ್ಞರ ನೇಮಕಾತಿ, ವರ್ಗಾವಣೆ ಮಾರ್ಗಸೂಚಿಗಳ ಉಲ್ಲಂಘನೆ, ತಾತ್ಕಾಲಿಕ ನೇಮಕಾತಿಗಳಲ್ಲಿ ಮೀಸಲಾತಿ ನಿಯಮಾವಳಿ ಪಾಲಿಸದಿರುವುದು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆಡಳಿತ ಮಂಡಳಿಯ ಸದಸ್ಯರು ಆರೋಪಿಸಿದ್ದರು. ಈ ಸಂಬಂಧ ರಾಜ್ಯಪಾಲರು ಕುಲಪತಿಯಿಂದ ವಿವರಣೆ ಕೋರಿದ್ದರು. ಕುಲಪತಿ ನೀಡಿದ್ದ ವಿವರಣೆಗಳ ಪ್ರಾಥಮಿಕ ಪರಿಶೀಲನೆಯ ನಂತರ ವಿಸತ ತನಿಖೆಯ ಅಗತ್ಯವಿದೆ ಎಂದು ರಾಜ್ಯಪಾಲರು ಪರಿಗಣಿಸಿದ್ದಾರೆ.
ಆದ್ದರಿಂದ ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ನ್ಯಾ. ಚಂದ್ರಶೇಖರ ಎಂ. ಜೋಶಿ ಅವರ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿ ರಚಿಸಬೇಕು. ಕುಲಪತಿಯವರ ಅಧಿಕಾರಾವಧಿ ಮುಗಿಯುವ ಮೊದಲು ಸಮಿತಿಯು ಶಿಫಾರಸುಗಳೊಂದಿಗೆ ವರದಿ ಸಲ್ಲಿಸಬೇಕು ಎಂದು ರಾಜ್ಯಪಾಲರು ವಿಶೇಷ ಕಾರ್ಯದಶಿರ್ ಆರ್. ಪ್ರಭುಶಂಕರ್ ಮೂಲಕ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.