ಹುಬ್ಬಳ್ಳಿಯಲ್ಲಿನ (Good Response) ಐಪಿಎಲ್ ಫ್ಯಾನ್ ಪಾರ್ಕ್ನಲ್ಲಿ ಲಕ್ಕಿ ಡ್ರಾ ವಿಜೇತರಿಗೆ ನೀಡಲಾಗುವ ಆಟಗಾರರ ಹಸ್ತಾಕ್ಷರವಿರುವ ಜರ್ಸಿಯನ್ನು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅನಾವರಣಗೊಳಿಸಲಾಯಿತು. ಸುಮಿತ್ ಮಲ್ಲಪುರಕರ, ಅಲ್ತಾಫ್ ಕಿತ್ತೂರ ಇದ್ದರು.
ಹುಬ್ಬಳ್ಳಿ: ಐಪಿಎಲ್ ಫ್ಯಾನ್ ಪಾರ್ಕ್ಗೆ (Good Response) ಹುಬ್ಬಳ್ಳಿಯಲ್ಲಿ ಯಾವಾಗಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಬಹುತೇಕ ಪ್ರತಿ ವರ್ಷ ಇಲ್ಲಿ ಫ್ಯಾನ್ ಪಾರ್ಕ್ ಆಯೋಜಿಸಿಕೊಂಡು ಬಂದಿದ್ದೇವೆ ಎಂದು ಬಿಸಿಸಿಐ ಹಿರಿಯ ವ್ಯವಸ್ಥಾಪಕ (ಕ್ರಿಕೆಟ್ ಕಾರ್ಯಾಚರಣೆ) ಸುಮಿತ್ ಮಲ್ಲಪುರಕರ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಗರದಲ್ಲಿ ಕ್ರಿಕೆಟ್ ಕ್ರೇಜ್ ಬಹಳ ಇದೆ. ಮೇ 9 ಹಾಗೂ 10ರಂದು ಇಲ್ಲಿಯ ಸಂತೋಷನಗರದ ಜೆ.ಕೆ. ಸ್ಕೂಲ್ ಬಳಿ ಬಿಡಿಕೆ ಮೈದಾನದಲ್ಲಿ ಫ್ಯಾನ್ ಪಾರ್ಕ್ ತೆರೆಯಲಾಗುತ್ತಿದೆ. 9ರಂದು ಸಂಜೆ 7.30 ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟನ್ಸ್, 10ರಂದು ಮಧ್ಯಾಹ್ನ 3.30ಕ್ಕೆ ಚನ್ನೈ ಸೂಪರ್ ಕಿಂಗ್ಸ್-ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿರುವ ಐಪಿಎಲ್ ಪಂದ್ಯದ ನೇರ ಪ್ರಸಾರವನ್ನು ಫ್ಯಾನ್ ಪಾರ್ಕ್ನಲ್ಲಿ 32 ಅಡಿ ಅಗಲ ಹಾಗೂ 18 ಅಡಿ ಉದ್ದದ ಬೃಹತ್ ಎಲ್ಇಡಿ ಪರದೆಯಲ್ಲಿ ವೀಕ್ಷಿಸಬಹುದಾಗಿದೆ ಎಂದರು.
ಪ್ರವೇಶ ಉಚಿತವಾಗಿರಲಿದೆ. ಅಂಗವಿಕಲರಿಗೆ ಹಾಗೂ ಹಿರಿಯರಿಗೆ ಮಾತ್ರ ಆಸನ ವ್ಯವಸ್ಥೆ ಇರುತ್ತದೆ. ಫೇಸ್ ಪೇಂಟಿಂಗ್, ಕಿಡ್ಸ್ ಝೋನ್, ಲಕ್ಕಿ ಡ್ರಾ, ಆಹಾರ ಮಳಿಗೆ, ವಾಟರ್ ಸ್ಟೇಷನ್ (ಕುಡಿಯುವ ನೀರಿನ ಸೌಲಭ್ಯ) ಇರಲಿದೆ. ಈಗಾಗಲೇ ಮೈಸೂರು ಮತ್ತು ತುಮಕೂರಿನಲ್ಲಿ ಫ್ಯಾನ್ ಪಾರ್ಕ್ ನಡೆಸಿದ್ದೇವೆ. ಮುಂದೆ ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ಫ್ಯಾನ್ ಪಾರ್ಕ್ ನಡೆಸಲಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ್ ಕಿತ್ತೂರ ಮಾತನಾಡಿ, ಸ್ಟೇಡಿಯಂಗೆ ಹೋಗಿ ಕ್ರಿಕೆಟ್ ವೀಕ್ಷಿಸಲು ಪ್ರತಿಯೊಬ್ಬರಿಗೂ ಸಾಧ್ಯವಾಗುವುದಿಲ್ಲ. ಕ್ರಿಕೆಟ್ ಅಭಿಮಾನಿಗಳಿಗೆ ಅದೇ ರೀತಿಯ ಅನುಭವ ನೀಡಲಿ ಎಂದು ಫ್ಯಾನ್ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಪ್ರತಿ ದಿನ 15 ಸಾವಿರ ಜನ ಭೇಟಿ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.