ಧಾರವಾಡ ತಾಲೂಕು ನವಲಗುಂದ ಪಟ್ಟಣದಲ್ಲಿ ಕಳವಾಗಿದ್ದ ಚಿನ್ನಾಭರಣಗಳನ್ನು ಎಸ್‌ಪಿ ಗುಂಜನ್ ಆರ್ಯ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು.
- ನವಲಗುಂದ ಪಟ್ಟಣದಲ್ಲಿ ನಡೆದಿದ್ದ ಕಳ್ಳತನ
- ಪ್ರಕರಣ ಭೇದಿಸಲು 2 ತಂಡ ರಚಿಸಿದ್ದ ಎಸ್‌ಪಿ ಗುಂಜನ್ ಆರ್ಯ
- ಕಾರ್ಯಾಚರಣೆಯಲ್ಲಿದ್ದ ತಂಡಕ್ಕೆ ವಿಶೇಷ ಬಹುಮಾನ ಘೋಷಣೆ
ಧಾರವಾಡ: ಮನೆಯಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಜಿಲ್ಲಾ ಪೊಲೀಸರು ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ನ. 29ರಂದು ನವಲಗುಂದ ಪಟ್ಟಣದ ಜಗದೀಶ ವಿರೂಪಾಕ್ಷಪ್ಪ ಮುಳ್ಳೂರ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಅಲ್ಮೇರಾದಲ್ಲಿದ್ದ ಸುಮಾರು 7,57,955 ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು.
ಪ್ರಕರಣ ಭೇದಿಸಲು ಎಸ್‌ಪಿ ಗುಂಜನ್ ಆರ್ಯ ಅವರು ನವಲಗುಂದ ಸಿಪಿಐ ರವಿಕುಮಾರ ಕಪ್ಪತನವರ ಹಾಗೂ ನವಲಗುಂದ ಪಿಎಸ್ಐ ಜನಾರ್ದನ ಬಿ. ನೇತೃತ್ವದ 2 ತಂಡಗಳನ್ನು ರಚಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡಗಳು, ನವಲಗುಂದ ಪಟ್ಟಣದ ಕಿರಣಕುಮಾರ ಶರಣಪ್ಪ ಕುಂಬಾರ ಎಂಬಾತನನ್ನು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತ ಕಳ್ಳತನ ಮಾಡಿರುವ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಲ್ಲದೆ, ತನ್ನೊಂದಿಗೆ ಸಲೀಂಅಹ್ಮದ್ ಮೋದಿನಸಾಬ ಬೈಲಹುಲಿ ಕೂಡ ಭಾಗಿಯಾಗಿರುವುದನ್ನು ಖಚಿತಪಡಿಸಿದ್ದ. ಆತನನ್ನೂ ವಶಕ್ಕೆ ಪಡೆದು 7,57,955 ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣ ಭೇದಿಸಲು ನವಲಗುಂದ ಠಾಣೆಯ ಅಧಿಕಾರಿ- ಸಿಬ್ಬಂದಿಗೆ ಹುಬ್ಬಳ್ಳಿ ಶಹರ ಠಾಣೆಯ ಅಧಿಕಾರಿಗಳು ನೆರವು ನೀಡಿದ್ದಾರೆ. ಕಾರ್ಯಾಚರಣೆಯಲ್ಲಿದ್ದ ತಂಡಗಳಿಗೆ ಎಸ್‌ಪಿ ಗುಂಜನ್ ಆರ್ಯ ವಿಶೇಷ ಬಹುಮಾನ ಘೋಷಿಸಿದ್ದಾರೆ.