ganesha mahamandala ಹುಬ್ಬಳ್ಳಿಯಲ್ಲಿ ‘ಗೆಜ್ಜೆನಾದ’ ಹೆಸರಿನಡಿ ಭಾನುವಾರ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಜೂನಿಯರ್ ವಿಭಾಗದ ಸಾನ್ವಿ ಧಡೇದ, ಶ್ರೇಯಾ ಹಡಪದ, ವಿಕಾಸ ಯಡವಟ್ಟಿ ಅವರಿಗೆ ಬಹುಮಾನ ವಿತರಿಸಲಾಯಿತು.
ಹುಬ್ಬಳ್ಳಿ: ಭಾರತೀಯ ಪ್ರಾಚೀನ ಕಲೆ, ಸಂಸ್ಕೃತಿಗಳನ್ನು ಪೋಷಿಸುವ
ಅಗತ್ಯವಿದೆ ಎಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ನೇತೃತ್ವದಲ್ಲಿ ಇಲ್ಲಿಯ ಮೂರುಸಾವಿರ ಮಠದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಗೆಜ್ಜೆನಾದ’ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠ ಟ್ರಸ್ಟ್ ಕಮಿಟಿ ಮಾಜಿ ಚೇರ್ಮನ್ ಧರಣೇಂದ್ರ ಜವಳಿ ಮಾತನಾಡಿ, ಭಾರತೀಯ ಸಂಪ್ರದಾಯವೇ ವಿಶ್ವದಲ್ಲಿ ಪರಮೋಚ್ಛ. ನಮ್ಮ ದೇಶೀಯ ಕಲೆ ಮತ್ತು ಸಂಸ್ಕೃತಿಯನ್ನು ಬೇರೆ ದೇಶಗಳು ಅಳವಡಿಸಿಕೊಳ್ಳುತ್ತಿವೆ. ಇಂಥದರಲ್ಲಿ ನಾವು ನಮ್ಮ ಕಲೆಯನ್ನು ನಾವು ಉಳಿಸಿ ಬೆಳೆಸಬೇಕು ಎಂದರು.
ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದ ಸಿದ್ದಪ್ಪ ಅಂಗಡಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಹಾಮಂಡಳದವರು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಸ್ತ್ರೀರೋಗಶಾಸ್ತ್ರಜ್ಞೆ ಡಾ. ಅಶ್ವಿನಿ ಕೊಳ್ಳೂರು ಮಾತನಾಡಿ, ಭರನಾಟ್ಯ ಸೇರಿದಂತೆ ಇತರ ಕಲೆಗಳನ್ನು ಬರೀ ಶಾಸ್ತ್ರೀಯವಾಗಿ ನೋಡದೇ ಆರೋಗ್ಯದ ದೃಷ್ಟಿಯಿಂದಲೂ ನೋಡಬಹುದು. ಚಿಕ್ಕ ವಯಸ್ಸಿನಲ್ಲಿಯೇ ಇಂಥ ಕಲೆ, ಸಂಸ್ಕೃತಿ ಅಳವಡಿಸಿಕೊಂಡಿರುವ ಮಕ್ಕಳು ಮನೋದೈಹಿಕವಾಗಿ ಆರೋಗ್ಯದಿಂದ ಇರುತ್ತಾರೆ ಎಂದು ವಿಶ್ಲೇಷಿಸಿದರು.
ಜೂನಿಯರ್ ವಿಭಾಗದಲ್ಲಿ ಸಾನ್ವಿ ಧಡೇದ (ಪ್ರಥಮ), ಶ್ರೇಯಾ ಹಡಪದ (ದ್ವಿತೀಯ), ವಿಕಾಸ ಯಡವಟ್ಟಿ (ತೃತೀಯ), ಸೀನಿಯರ್ ವಿಭಾಗದಲ್ಲಿ ಅನನ್ಯ ರಾಯಭಾಗಿ (ಪ್ರಥಮ), ಅದಿತಿ ಸಡ್ಲಿ (ದ್ವಿತೀಯ), ಹರ್ಷಿಣಿ ಕಟ್ಟಿ (ತೃತೀಯ) ಬಹುಮಾನ ಪಡೆದರು.
ವಿದುಷಿ ಸುಶ್ಮಾ ಕೊಂಗಿ, ಸ್ಟಿಫನ್ ಲುಂಜಾಳ, ಸುರೇಂದ್ರ ಜಹಾಗೀರದಾರ, ಚಂದ್ರಶೇಖರ ಗಾಣಿಗೇರ ಇತರರು ಸಂಗೀತ ಸೇವೆ ನೀಡಿದರು.
ರುದ್ರ ಮೋಟರ್ಸ್ ಎಂಡಿ ಶ್ರೀನಿವಾಸ ಅಂಗಡಿ, ಕಲಾವಿದ ಸಾಯಿನಾಥ ಹಿತ್ತಾಳೆ, ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಉಪಾಧ್ಯಕ್ಷರಾದ ಅಲ್ತಾಫ್ ಕಿತ್ತೂರ, ಎಸ್.ಎಸ್. ಕಮಡೊಳ್ಳಿ ಶೆಟ್ಟರ್, ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಬಸವರಾಜ ಕಟ್ಟಿಮನಿ, ಪ್ರಕಾಶ ಚಳಗೇರಿ, ತನುಜಾ ನಾಯಕ, ಪ್ರಸನ್ನ ಹಿರೇಮಠ, ಪ್ರಮುಖರಾದ ಚನ್ನಬಸಪ್ಪ ಧಾರವಾಡಶೆಟ್ಟರ್, ಅನಿತಾ ಜಡಿ, ಆಶಾ ಪತ್ತಾರ, ರತ್ನಾ ಬಸಾಪೂರ, ಸುನಿತಾ ಸಂಕಣ್ಣವರ, ಅನಿಲ ಬೇವಿನಕಟ್ಟಿ ಇತರರಿದ್ದರು. ಗಾಯತ್ರಿ ನೆಲ್ಲಿಕೊಪ್ಪ ನಿರೂಪಿಸಿದರು.