flag ಹುಬ್ಬಳ್ಳಿಯ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಭಗವಾಧ್ವಜ ಹಿಡಿದ ಗಣೇಶನ ಮೂರ್ತಿ.
- ಸೆ. 14ರಿಂದ 16ರವರೆಗೆ ಪ್ರತಿಷ್ಠಾಪನೆ
- 14ರಂದು ಬೆಳಗ್ಗೆ 9 ಗಂಟೆಗೆ ಮೂರುಸಾವಿರ ಮಠದಿಂದ ಆರಂಭಗೊಳ್ಳುವ ಗಣೇಶ ಮೂರ್ತಿಯ ಮೆರವಣಿಗೆ
- ದೇಸಿ ವಾದ್ಯ ಮೇಳಗಳ ಮೂಲಕ ಮೆರವಣಿಗೆ ನಡೆಯಲಿದೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಬೆಳಗ್ಗೆ 9 ಗಂಟೆಗೆ ಮೂರುಸಾವಿರ ಮಠದಿಂದ ಆರಂಭಗೊಳ್ಳುವ ಗಣೇಶ ಮೂರ್ತಿಯ ಮೆರವಣಿಗೆಗೆ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡುವರು. ಮಧ್ಯಾಹ್ನ 12ಕ್ಕೆ ಮೂರ್ತಿ ರಾಣಿ ಚನ್ನಮ್ಮ ಮೈದಾನ ತಲುಪಲಿದೆ ಎಂದು ಹೇಳಿದರು.
ಸೆ. 12ರಂದು ಬೆಳಗ್ಗೆ ಹಾಲಗಂಬ ಪೂಜೆ ನಡೆಯಲಿದೆ. ಮೂರ್ತಿ ಪ್ರತಿಷ್ಠಾಪನೆಗೆ ವಿಶೇಷ ವೇದಿಕೆ ನಿರ್ವಿುಸಲಾಗುವುದು. ಮೂರು ದಿನಗಳವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಹೋಮ, ಹವನ ನಡೆಯಲಿವೆ ಎಂದು ತಿಳಿಸಿದರು.
16 ರಂದು ಬೆಳಗ್ಗೆ 11.55ಕ್ಕೆ ಗಣೇಶ ಮೂರ್ತಿಯನ್ನು ಮೈದಾನದಿಂದ ಹೊರಗೆ ತರಲಾಗುವುದು. ಮಧ್ಯಾಹ್ನ 12 ಗಂಟೆಗೆ ವಿಶ್ವ ಹಿಂದೂ ಪರಿಷತ್ನ ಕೇಂದ್ರೀಯ ಕಾರ್ಯದರ್ಶಿ ಗೋಪಾಲಜಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ನಂತರ ವಿಸರ್ಜನಾ ಮೆರವಣಿಗೆ ಆರಂಭಗೊಳ್ಳಲಿದೆ ಎಂದರು.
ಗಣೇಶ ಮೂರ್ತಿ ತರುವ ಹಾಗೂ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಬಳಕೆ ಮಾಡುವುದಿಲ್ಲ. ದೇಸಿ ವಾದ್ಯ ಮೇಳಗಳ ಮೂಲಕ ಮೆರವಣಿಗೆ ನಡೆಯಲಿದೆ. ನೂರಾರು ಕಲಾವಿದರು ಪಾಲ್ಗೊಳ್ಳಲಿದ್ದಾರೆ. 16ರಂದು ಸಂಜೆ 5 ಗಂಟೆಗೆ ಹೊಸೂರು ಬಾವಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ ಎಂದು ಹೇಳಿದರು.
ಕಳೆದ 4 ವರ್ಷಗಳಿಂದ ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ಈ ಬಾರಿ 5ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ವಿಜೃಂಭಣೆಯಿಂದ ಜರುಗಲಿದೆ ಎಂದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಆಯುಕ್ತರು ಹಲವಾರು ಶರತ್ತುಗಳನ್ನು ವಿಧಿಸಿದ್ದು, ಅವುಗಳನ್ನು ಪಾಲನೆ ಮಾಡಲಾಗುವುದು.
ಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನೀಡಿದ್ದ ಗಡವಿಗೆ ವಿನಾಯಿತಿ ನೀಡುವಂತೆ ಮಾಡಿದ್ದ ಮನವಿಗೆ ಆಯುಕ್ತರು ಸ್ಪಂದಿಸಿದ್ದಾರೆ. ವಿಸರ್ಜನೆ ದಿನದಂದು ಮಧ್ಯಾಹ್ನ 12 ಗಂಟೆಯೊಳಗೆ ಮೂರ್ತಿಯನ್ನು ಮೈದಾನದಿಂದ ಹೊರಗೆ ತರುವ ಶರತ್ತು ಸಹ ಇದ್ದು, ಅದನ್ನು ಪಾಲಿಸಲಾಗುವುದು ಎಂದು ತಿಳಿಸಿದರು.
ಉತ್ಸವದ ಯಶಸ್ವಿ ಆಯೋಜನೆಗೆ ಸ್ವಾಗತ ಸಮಿತಿ ಮತ್ತು ಉತ್ಸವ ಸಮಿತಿ ರಚಿಸಲಾಗಿದೆ. ಮಹಾದೇವ ಕರಮರಿ, ಎಚ್.ಎನ್. ನಂದಕುಮಾರ ಹಾಗೂ ವಿ.ಎಸ್.ವಿ. ಪ್ರಸಾದ ಅವರು ಉತ್ಸವದ ಮಹಾಪೋಷಕರಾಗಿದ್ದಾರೆ.
ಸುಮಾರು 41 ಜನ ಸದಸ್ಯರನ್ನು ಸಮಿತಿ ಒಳಗೊಂಡಿದ್ದು, ಉದ್ಯಮಿ ಗೌತಮ ಬಾಫಣಾ ಅವರು ಉತ್ಸವ ಸಮಿತಿ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.
ಮಹಾದೇವ ಕರಮರಿ, ಗೌತಮ ಬಾಫಣಾ, ರವಿ ದಂಡಿನ, ರಮೇಶ ಕದಂ ಸುದ್ದಿಗೋಷ್ಠಿಯಲ್ಲಿ ಇದ್ದರು.