ಹುಬ್ಬಳ್ಳಿ: ರೈತರು ಮನೆ, ಹೊಲ ಬಿಟ್ಟು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗೆ ಇಳಿದಿದ್ದಾರೆ. ರಸ್ತೆ ಮೇಲೆಯೇ ಮಲಗುತ್ತಿದ್ದಾರೆ. ದೇಶದ ಬೆನ್ನೆಲುಬು ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳುವ ಎಲ್ಲ ಪಕ್ಷದವರು ಮಾನವೀಯತೆ ಇಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ. ಒಕ್ಕಲುತನ ಮಾಡುವವರಿಗೆ ವರವಾಗಬೇಕಾದ ಸರ್ಕಾರಗಳು ಶಾಪವಾಗಿ ಪರಿಣಮಿಸಿವೆ ಎಂದು ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ದೆಹಲಿಗೆ ಬರಲು ಹೇಳಿ ಬೇಡಿಕೆ ಈಡೇರಿಸದೇ ಅವಮಾನ ಮಾಡಿ ಕಳಿಸಲಾಗಿದೆ. ಈಗಾಗಲೇ ಡಾ. ಸ್ವಾಮಿನಾಥನ್ ವರದಿ ಕೈಯಲ್ಲಿ ಇರುವಾಗ ಅದನ್ನು ಯಥಾವತ್ ಜಾರಿ ಮಾಡುವುದು ಬಿಟ್ಟು ಮತ್ತೆ ಸಮಿತಿ ಮಾಡುವುದಾಗಿ ಹೇಳಿರುವುದು ಸರಿಯಲ್ಲ. ಕಬ್ಬು ಕಟಾವ್ ಹಂತಕ್ಕೆ ಬಂದಿದೆ. ಕೂಡಲೇ ಬೇಡಿಕೆ ಈಡೇರಿಸಬೇಕು. ಈ ಭಾಗದ ಸಂಸದರು, ಕೇಂದ್ರದಲ್ಲಿ ಸಚಿವರಾದವರು ತಾಕತ್ತು ಇದ್ದರೆ ಬೇಡಿಕೆ ಶೀಘ್ರ ಈಡೇರಿಸಲಿ, ಆಗದೇ ಇದ್ದರೆ ರಾಜೀನಾಮೆ ಕೊಡಲಿ, ಇಲ್ಲದಿದ್ದರೆ ನೀವು ಹುಬ್ಬಳ್ಳಿಗೆ ಕಾಲಿಡುವುದು ದುಸ್ತರವಾಗಲಿದೆ ಎಂದು ಪ್ರಲ್ಹಾದ ಜೋಶಿ ಅವರ ಹೆಸರು ಹೇಳದೇ ಎಚ್ಚರಿಕೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಆದರ್ಶರು ಎಂದು ಕರೆಯಲಾಗುತ್ತದೆ. ಆದರೆ, ದೇಶದ ರೈತರು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದರೂ ಮಾತನಾಡದೇ ಇರುವುದು ಸರಿಯಲ್ಲ. ಅವರು ದೃತರಾಷ್ಟ್ರನ ನೀತಿ ಬಿಟ್ಟು ಧರ್ಮರಾಯನ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ನಿಮ್ಮ ಅಗತ್ಯ ದೇಶಕ್ಕೆ ಉಳಿಯಲಿಕ್ಕಿಲ್ಲ ಎಂದೂ ಸ್ವಾಮೀಜಿ ಎಚ್ಚರಿಸಿದರು.
ರೈತರ ಹೆಸರಿನಲ್ಲಿ ಯಾರೂ ರಾಜಕಾರಣ ಮಾಡಬಾರದು. ಹಾಗೆ ಮಾಡಿದರೆ ಅದು ಹೆತ್ತ ತಾಯಿಗೆ ದ್ರೋಹ ಬಗೆದಂತೆ. ರೈತರಿಗೆ ಎಲ್ಲ ಮಠಾಧೀಶರು, ಸನ್ಯಾಸಿಗಳು, ಧರ್ಮಗುರುಗಳು ಬೆಂಬಲ ನೀಡಬೇಕು. ಚಿತ್ರ ನಟ, ನಟಿಯರು, ಕಲಾವಿದರು, ಸಾಹಿತಿಗಳು ಹೋರಾಟಕ್ಕೆ ಬರಬೇಕು. ಹಿಂದೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾಲೆ ಧರಿಸುವುದಿಲ್ಲ ಎಂದು ಹೇಳಿದ್ದೆ. ಈಗ ರೈತರ ಬೇಡಿಕೆ ಈಡೇರುವವರೆಗೂ ಸಕ್ಕರೆ ತಿನ್ನುವುದಿಲ್ಲ ಎಂದು ಘೋಷಣೆ ಮಾಡುತ್ತೇನೆ ಎಂದರು.
ಗ್ಯಾರಂಟಿ ಹಣ ಕೊಡಿ: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗಾಗಿ ಒಂದು ವರ್ಷದ ಗ್ಯಾರಂಟಿ ಯೋಜನೆಗಳ ಹಣವನ್ನು ಖರ್ಚು ಮಾಡಬೇಕು. ರೈತರ ಕಷ್ಟಕ್ಕೆ ನೆರವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.
ಸ್ವಾಮಿನಾಥನ್ ವರದಿ ಜಾರಿಯೊಂದಿಗೆ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ಜಾರಿಗೆ ತರಬೇಕು. ಅಂದಾಗ ಮಾತ್ರ ಈ ಸರ್ಕಾರಗಳು ರೈತರ ಪರ ಎಂಬುದನ್ನು ಒಪ್ಪಬಹುದು ಎಂದು ಹೇಳಿದರು.
ಸವಣೂರು ದೊಡ್ಡ ಹುಣಸೆಮಠ ಶ್ರೀ ಚನ್ನಬಸವಾನಂದ ಸ್ವಾಮಿಜಿ, ಮಹಾಂತೇಶ ಗಿರಿಮಠ, ಶಂಭು ಲಕ್ಷ್ಮೇಶ್ವರಮಠ, ಪ್ರಕಾಶ ಹಳ್ಯಾಳ, ಮಲ್ಲಿಕಾರ್ಜುನ ಶಿರಗುಪ್ಪಿ ಇತರರು ಗೋಷ್ಠಿಯಲ್ಲಿದ್ದರು.