ಸ್ವಾಭಿಮಾನಿ ಹೋರಾಟಗಾರರ ವೇದಿಕೆ ಹೋರಾಟ 
ಧಾರವಾಡ

ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ "ಸ್ವಾಭಿಮಾನಿ' ಹೋರಾಟ ಹೊಸ ರೂಪ

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಹೋರಾಟ ಹೊಸ ರೂಪ ಪಡೆದಿದೆ. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸ್ವಾಭಿಮಾನಿ ಹೋರಾಟಗಾರರ ಚಿಂತನ ಮಂಥನ ಸಭೆಯಲ್ಲಿ 3 ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪ್ರತ್ಯೇಕ ಪಾಲಿಕೆ ರಚನೆಯ ಕಡತ ಕುರಿತು ಸ್ಪಷ್ಟನೆ ಕೋರಿ ಚಚಿರ್ಸಲು ರಾಜ್ಯಪಾಲರ ಭೇಟಿಗೆ ಅವಕಾಶ ಪಡೆಯಲು 3 ದಿನಗಳ ಕಾಲಮಿತಿ ನಿಗದಿಪಡಿಸಲಾಯಿತು. ನ್ಯಾಯಯುತ ಬೇಡಿಕೆಗೆ, ಸರ್ಕಾರದ ನಿರ್ಧಾರಕ್ಕೆ ಅನುಮೋದನೆ ಕೊಡದಿದ್ದರೆ "ರಾಜಭವನ ಚಲೋ' ಸತ್ಯ ಪ್ರತಿಪಾದನ ಸತ್ಯಾಗ್ರಹವನ್ನು ರಾಜಭವನ ಎದುರು ನಡೆಸಲಾಗುವುದು. ಪ್ರತ್ಯೇಕ ಹೋರಾಟವನ್ನು ಜನಸಾಮಾನ್ಯರ ಹೋರಾಟವನ್ನಾಗಿ ಪರಿವತಿರ್ಸಲು ಮತ್ತು ಸರ್ಕಾರದ ಗಮನ ಸೆಳೆಯಲು ಶೀಘ್ರದಲ್ಲೇ 'ಧಾರವಾಡ ಬಂದ್​' ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜೆಡಿಎಸ್​ ಮುಖಂಡ ಗುರುರಾಜ ಹುಣಸೀಮರದ ಮಾತನಾಡಿ, ರಾಜಕಾರಣಿಗಳು ಪ್ರತ್ಯೇಕ ಮಹಾನಗರ ಪಾಲಿಕೆಯ ದಿಕ್ಕು ತಪ್ಪಿಸಿದರು. ಈಗ ಎಚ್ಚೆತ್ತು ಹೋರಾಟ ಮಾಡದಿದ್ದರೆ ಧಾರವಾಡಕ್ಕೆ ಅನ್ಯಾಯ ಮುಂದುವರಿಯಲಿದೆ ಎಂದರು.
ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವೆಂಕಟೇಶ ಮಾಚಕನೂರ ಮಾತನಾಡಿ, ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು, ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಪಾಲಿಕೆ ರಚನೆಯಾಗಲೇಬೇಕು. ಅಲ್ಲಿಯವರೆಗೆ ಹೋರಾಟ ನಿಲ್ಲದು ಎಂದರು.
ಸಾಮಾಜಿಕ ಹೋರಾಟಗಾರ ಬಿ.ಡಿ. ಹಿರೇಮಠ ಮಾತನಾಡಿ, ಪ್ರತ್ಯೇಕ ಮಹಾನಗರ ಪಾಲಿಕೆಯ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ಜನರ ಒಲವು ಪ್ರತ್ಯೇಕ ಮಹಾನಗರ ಪಾಲಿಕೆ ಕಡೆ ಇದೆ. ಹೈಕೋರ್ಟ್​ ಹಾಗೂ ಮಹದಾಯಿ ಹೋರಾಟದ ಮಾದರಿಯಲ್ಲಿ ಪ್ರತ್ಯೇಕ ಪಾಲಿಕೆ ಹೋರಾಟ ಮಾಡೋಣ ಎಂದರು.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆ ಅಧ್ಯಕ್ಷ ಮನೋಜ ಪಾಟೀಲ ಮಾತನಾಡಿದರು.
ವಿದ್ಯಾವರ್ಧಕ ಸಂದ ಪದಾಧಿಕಾರಿಗಳು ಮತ್ತು ಸದಸ್ಯರು, ಪಾಲಿಕೆಯ ಕಾಂಗ್ರೆಸ್​ ಸದಸ್ಯರು, ಸಾಹಿತಿಗಳು, ವಕೀಲರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ನಗರದ ಗಣ್ಯರು, ವರ್ತಕರು ಪಾಲ್ಗೊಂಡಿದ್ದರು. ಧಾರವಾಡದ ಹಿತದೃಷ್ಟಿಯಿಂದ ಹೋರಾಟಕ್ಕೆ ಕೈ ಜೋಡಿಸುವ ಸಂಕಲ್ಪ ಮಾಡಿದರು.
ಸಭೆಯ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮೂಲಕ ರಾಜ್ಯಪಾಲರು ಮತ್ತು ಸರ್ಕಾರಕ್ಕೆ ನಿರ್ಣಯಗಳ ಪಟ್ಟಿಯನ್ನು ರವಾನಿಸಲಾಯಿತು.