folkart ಹುಬ್ಬಳ್ಳಿಯ ಉದಯನಗರದಲ್ಲಿ ಏರ್ಪಡಿಸಿದ್ದ ಲಲಿತ ಕಲಾ ಸಂಭ್ರಮದಲ್ಲಿ ಡಾ. ರಾಮಚಂದ್ರ ಕೌಲಗಿ, ಮುರಳೀಧರ ಮಳಗಿ, ಸುಭಾಸ ನರೇಂದ್ರ, ಲಕ್ಷ್ಮಣರಾವ ಓಕ್, ವಸಂತ ನಾಕೋಡ, ವಿನಯ ನಾಯಕ, ಇತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ: folkart ಇಲ್ಲಿಯ ಸಂಸ್ಕಾರ ಭಾರತಿ ಹಾಗೂ ಸುನಿಧಿ ಕಲಾ ಸೌರಭ ಇವುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಇಲ್ಲಿನ ಉದಯನಗರದ ಲಕ್ಷ್ಮೀನಾರಾಯಣ ಸಭಾಗೃಹದಲ್ಲಿ ಲಲಿತ ಕಲಾ ಸಂಭ್ರಮ ಆಯೋಜಿಸಲಾಗಿತ್ತು.
ಅಭಿನಯ, ನೃತ್ಯ, ಸಂಗೀತ, ಚಿತ್ರಕಲೆ, ನಾಟ್ಯಗಿತೆ, ಭಾವಗೀತೆ, ಜಾನಪದ ಗೀತೆಗಳ ಕಲಾ ಪ್ರದರ್ಶನದ ಲಲಿತ ಕಲಾ ಸಂಭ್ರಮ ಜನಮನ ಸೂರೆಗೊಂಡಿತು.
ಅತಿಥಿಯಾಗಿದ್ದ ಮುರಳೀಧರ ಮಳಗಿ ಮಾತನಾಡಿ, ಹಿಂದೆ ಕಲೆಗಳಿಗೆ ರಾಜಾಶ್ರಯವಿತ್ತು. ಈಗ ಸರ್ಕಾರದಿಂದ ಸ್ವಲ್ಪ ಮಟ್ಟಿಗೆ ಸಹಾಯ ಸಹಕಾರ ದೊರೆಯುತ್ತಿದೆ. ನಮ್ಮ ದೇಶೀಯ ಕಲೆಗಳಲ್ಲಿ ಹಲವು ನಶಿಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ.
ಈ ನಿಟ್ಟಿನಲ್ಲಿ ಸುನಿಧಿ ಕಲಾ ಸೌರಭ ಬಹಳಷ್ಟು ಕಾರ್ಯ ಮಾಡುತ್ತಿದೆ. ಹತ್ತು ಹಲವು ಶಿಬಿರಗಳನ್ನು ಹಮ್ಮಿಕೊಂಡು ಮಕ್ಕಳಿಗೆ ತರಬೇತಿ ನೀಡಿ ಕಲಾ ಪ್ರತಿಭೆಗಳನ್ನು ಹುಟ್ಟು ಹಾಕುತ್ತಿದೆ ಎಂದು ಹೇಳಿದರು. ತಜ್ಞ ವೈದ್ಯ ಡಾ. ರಾಮಚಂದ್ರ ಕೌಲಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ನಗರದ ಸ್ಟೇಷನ್ ರಸ್ತೆ ಬಳಿಯ ಈಶ್ವರ ದೇವಸ್ಥಾನದ ಧರ್ಮದರ್ಶಿ ಲಕ್ಷ್ಮಣರಾವ ಓಕ್, ಸಂಸ್ಕಾರ ಭಾರತಿ ಮಹಾನಗರ ಅಧ್ಯಕ್ಷ ಹಾಗೂ ಖ್ಯಾತ ಸಂಗೀತ ಕಲಾವಿದ ವಸಂತ ನಾಕೋಡ, ಪ್ರಧಾನ ಕಾರ್ಯದರ್ಶಿ ವಿನಯ ನಾಯಕ, ಸುನಿಧಿ ಕಲಾ ಸೌರಭ ಅಧ್ಯಕ್ಷ ಹಾಗೂ ಧಾರವಾಡ ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಉಪಸ್ಥಿತರಿದ್ದರು.
ಹು- ಧಾ ಮಹಾನಗರ ಪಾಲಿಕೆಯಿಂದ ಧೀಮಂತ ಪ್ರಶಸ್ತಿ ಪಡೆದ ಹಿರಿಯ ಕಲಾವಿದೆ ವೀಣಾ ಆಠವಲೆ ಮತ್ತು ಬಾಲ ಕಲಾವಿದ ಅವನೀಶ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.
ಅವನೀಶ, ವಿಭಾ ಅರತಾಳ, ಸಂತೋಷ ಮೋಕಾಶಿ, ಬಸವರಾಜ ನರಸಾಪುರ, ರಾಘವೇಂದ್ರ ಗಾಂವಕರ, ಹರ್ಷವರ್ಧನ, ವಿಶ್ವನಾಥ, ಸಂಧ್ಯಾ ದೀಕ್ಷಿತ, ವೆಂಕಟೇಶ ಭಂಡಾರಿ, ಸಮರ್ಥ ಮತ್ತು ತಂಡ, ಅಭಿಷೇಕ ಮತ್ತು ತಂಡದಿಂದ ಜರುಗಿದ ವಿವಿಧ ಕಲಾ ಪ್ರದರ್ಶನ ಪ್ರೇಕ್ಷಕರ ಮನ ಸೂರೆಗೊಂಡವು.