ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ (flyover)ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಆರ್. ಸ್ನೇಹಲ್ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಜಂಟಿಯಾಗಿ ಬುಧವಾರ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹುಬ್ಬಳ್ಳಿ: ಮೇಲ್ಸೇತುವೆ (flyover)ಕಾಮಗಾರಿ ಪೂರ್ಣಗೊಳಿಸಲು ಈ ಹಿಂದೆ ಏಪ್ರಿಲ್ ಅಂತ್ಯದವರೆಗೆ ಗಡುವು ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳದಿದ್ದರೂ ವೇಗ ಪಡೆದುಕೊಂಡಿದೆ. ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಗುತ್ತಿಗೆದಾರರಿಗೆ ಹೇಳಿದರು.
ನಗರದ ಹೊಸೂರು ವೃತ್ತದ ಗಾಳಿ ದುರ್ಗಮ್ಮ ದೇವಸ್ಥಾನದಿಂದ ಕಿತ್ತೂರು ಚನ್ನಮ್ಮ ವೃತ್ತದವರೆಗಿನ ಮೇಲ್ಸೇತುವೆ ಕಾಮಗಾರಿಯನ್ನು ಬುಧವಾರ ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರೊಂದಿಗೆ ವೀಕ್ಷಣೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗದಗ ರಸ್ತೆಯಲ್ಲಿನ ಆಸ್ತಿಗಳ ಭೂಸ್ವಾಧೀನ, ಉಪನಗರ ಪೋಲಿಸ್ ಠಾಣೆ ಸ್ಥಳಾಂತರ ವಿಳಂಬ ಕಾರಣ ಕಾಮಗಾರಿ ವೇಗ ಕುಗ್ಗಿದ್ದು ನಿಜ. ಆದರೀಗ ಎಲ್ಲವೂ ತಿಳಿಗೊಂಡಿದೆ. ಕಳೆದ ಎರಡೂವರೆ ವರ್ಷಗಳಿಂದ ಗುತ್ತಿಗೆದಾರರ ಮೇಲೆ ನಾವು ಒತ್ತಡ ಹೇರದಿದ್ದರೆ ಹುಬ್ಬಳ್ಳಿಯ ಪರಿಸ್ಥಿತಿ ಅಧ್ವಾನವಾಗುತ್ತಿತ್ತು. ಅಧಿಕಾಕಾರಿಗಳು, ಗುತ್ತಿಗೆದಾರರ ಮೇಲೆ ಹೆಚ್ಚಿನ ಒತ್ತಡ ಹೇರಿ ಮುತವರ್ಜಿಯಿಂದ ಕಾಮಗಾರಿ ಮುಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಚನ್ನಮ್ಮ ವೃತ್ತ ಮತ್ತು ಹೊಸೂರು ವೃತ್ತದಲ್ಲಿ 19ಕ್ಕೂ ಹೆಚ್ಚು ಗರ್ಡರ್ ಅಳವಡಿಸಬೇಕಿದ್ದು, 2 ತಿಂಗಳು ಹೊಸೂರು ವೃತ್ತದ ಸಂಚಾರ ಸ್ಥಗಿತಗೊಳಿಸುವಂತೆ ಗುತ್ತಿಗೆದಾರರು ಕೇಳಿಕೊಂಡಿದ್ದಾರೆ. ಆದರೆ, ದ್ವಿಚಕ್ರ ಸೇರಿ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ಭಾರೀ ಗಾತ್ರದ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ವಾರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಆರ್. ಸ್ನೇಹಲ್ ಮಾತನಾಡಿ, ನಿರ್ಮಾಣದ ಹಂತದ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಜುಲೈ ಅಂತ್ಯದವರೆಗೆ ಗಡುವು ನೀಡಲಾಗಿದೆ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದೆ ನೀಡಿದ್ದ ಗಡುವಿನ ಪ್ರಕಾರ ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಸಂಪೂರ್ಣ ಮುಗಿಯಬೇಕಿತ್ತು. ಆದರೆ, ಕೆಲ ತಾಂತ್ರಿಕ ಕಾರಣದಿಂದ ಸಾಕಷ್ಟು ಕಾಮಗಾರಿಗಳು ಬಾಕಿ ಉಳಿದವೆ. ಅದರಲ್ಲೂ ಸಂಚಾರಕ್ಕೆ ಅನುವು ಮಾಡಿಕೊಟ್ಟು ಕಾಮಗಾರಿ ನಡೆಸುವುದು ಕಷ್ಟ. ಕೇವಲ ಫ್ಲೈಓವರ್ ಕಾಮಗಾರಿ ಮಾತ್ರ ನೋಡದೇ, ಅದಕ್ಕೆ ಸಂಬಂಧಿಸಿದಂತೆ ಕುಡಿವ ನೀರಿನ ಪೈಪ್‌ಲೈನ್ ಅಳವಡಿಕೆ, ರಸ್ತೆ ನಿರ್ಮಾಣ, ವಿದ್ಯುತ್ ಲೈನ್ ಅಳವಡಿಕೆ, ಕೇಬಲ್‌ಗಳು ಹಾಗೂ ಯುಜಿಡಿ ಲೈನ್ ಅಳವಡಿಕೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದವು. ಈಗ ಅವೆಲ್ಲವೂ ನಿವಾರಣೆಯಾಗಿವೆ. ಮುಂದಿನ ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಎಡಿಸಿ ಸಿ.ಡಿ. ಗೀತಾ, ತಹಸೀಲ್ದಾರ್ ಮಹೇಶ ಗಸ್ತೆ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್‌ಗಳಾದ ವಿ.ಎನ್. ಪಾಟೀಲ, ಸತೀಶ ನಾಗನೂರ, ಬಿಜೆಪಿ ಮುಖಂಡ ರವಿ ನಾಯಕ ಇತರರು ಇದ್ದರು.