ಧಾರವಾಡ: ನಗರ ಹೊರವಲಯದ ತಡಸಿನಕೊಪ್ಪ ಸರಹದ್ದಿನ ಜಮೀನಿನಲ್ಲಿ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಿಲೋಮಿನಾ, ಪ್ರವಿಣ ಸುತಾರ, ಇಂದ್ರಪಾಲ್ ಸಿಂಗ್, ಬೆಂಜಮಿನ್, ವಿಶಾಲ ಜಾಧವ ಎಂಬುವರನ್ನು ಬಂಧಿಸಲಾಗಿದೆ. ತಡಸಿನಕೊಪ್ಪದ ವಿವಾದಿತ ಜಮೀನೊಂದರಲ್ಲಿ ಮಧ್ಯಾಹ್ನ ಸಂಘರ್ಷ ನಡೆದಿತ್ತು. ಆರೋಪಿಗಳು ತಾವು ಆ ಜಮೀನು ಖರೀದಿ ಮಾಡಿದ್ದೇವೆ ಎಂದು ಹೇಳಿ ಜೆಸಿಬಿ ಬಳಸಿ ಸಮತಟ್ಟು ಮಾಡುತ್ತಿದ್ದರು. ಈ ವೇಳೆ ವಾಲೀಕಾರ ಕುಟುಂಬದವರು ಕೆಲಸಕ್ಕೆ ತಡೆಯೊಡ್ಡಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳು ಪಿಸ್ತೂಲ್ ಮತ್ತು ರಿವಾಲ್ವರ್ಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪರಸ್ಪರ ಗಲಾಟೆಯಲ್ಲಿ ವಿಠ್ಠಲ ವಾಲೀಕಾರ ಎಂಬಾತನ ಪಾದಕ್ಕೆ ಗುಂಡು ಬಿದ್ದು ಗಾಯಗೊಂಡಿದ್ದ. ಈ ಕುರಿತು ದೂರು ನೀಡಿದ್ದ ಗಾಯಾಳು ಸಂಬಂಧಿಕರು ಅಂಗರಕ್ಷಕರ ಬಳಿ ಇದ್ದ ಪಿಸ್ತೂಲ್ ಬಳಸಿ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದರು ಎಂದರು.
ವಿದ್ಯಾಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು. ಕೊಲೆ ಯತ್ನ ಮತ್ತು ಜಾತಿ ನಿಂದನೆ ಮಾಡಿದ ಆರೋಪದಡಿ ಐವರನ್ನು ಬಂಧಿಸಲಾಗಿದೆ. ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರವಿಣ ಸುತಾರ ಹಾಗೂ ಸುಂದರ್ ಪಾಲ್ ಎಂಬುವರು ಗುಂಡು ಹಾರಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಪ್ರವಿಣ ಸುತಾರ ತನ್ನದೆ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಲಾಗಿದೆ. ಅಂಗರಕ್ಷಕ ಇಂದರ್ಪಾಲ್ ರಿವಾಲ್ವಾರ್ನಿಂದ ಗುಂಡು ಹಾರಿಸಿದ್ದ ಸುಂದರ್ ಪಾಲ್ ಪರಾರಿಯಾಗಿದ್ದಾನೆ. ಆತ ಪರಾರಿಯಾಗಿದ್ದು, 5 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದರು.