Finnovate ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ನಲ್ಲಿ ಐಬಿಎಂಆರ್ ಕಾಲೇಜ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಫಿನ್ನೋವೇಟ್ ಶೃಂಗಸಭೆ ಉದ್ಘಾಟಿಸಲಾಯಿತು. ವಿನಯಚಂದ್ರ ಮಹೇಂದ್ರಕರ್, ಸುಮಾ ಮಹೇಂದ್ರಕರ, ರವೀಂದ್ರನಾಥ ದಂಡಿನ, ಡಾ. ಎಚ್.ವಿ. ಬೆಳಗಲಿ, ಪಾಲ್ಗೊಂಡರು.
- ಐಬಿಎಂಆರ್ನಿಂದ ಫಿನ್ನೋವೇಟ್ ಸಮ್ಮೀಟ್
- ವಿಕಸಿತ ಭಾರತ ಸಂಕಲ್ಪಕ್ಕೆ ಪೂರಕ
ಅಂತಾರಾಷ್ಟ್ರೀಯ ಮಟ್ಟದ ಫಿನ್ಟೆಕ್ ಮತ್ತು ನಾವಿನ್ಯತೆ ಸಮ್ಮೀಟ್ ಇದಾಗಿದ್ದು, ವಿವಿಧೆಡೆಯಿಂದ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ವಿಕಸಿತ ಭಾರತ ಸಂಕಲ್ಪದೊಂದಿಗೆ ಆಯೋಜಿಸಿದ್ದ ಸಮ್ಮೇಳನಕ್ಕೆ ಅನೇಕ ವಿದ್ಯಾರ್ಥಿಗಳು, ವಾಣಿಜ್ಯೋದ್ಯಮಿಗಳು, ಉದ್ಯಮಶೀಲರು ಆಗಮಿಸಿದ್ದರು. ತಜ್ಞರು, ಉದ್ಯಮದಲ್ಲಿ ಯಶಸ್ಸು ಕಂಡವರು ತಮ್ಮದೇ ಆದ ಅನುಭವಗಳನ್ನು ಹಂಚಿಕೊಂಡರು. ಇದರಿಂದ ನವೋದ್ಯಮಿಗಳು, ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಯಿತು.
ತಂತ್ರಜ್ಞಾನ ಭರಿತ ಭಾರತ
ಫಿನ್ನೋವೇಟ್ ಶೃಂಗಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಬಿಎಂಆರ್ ಚೇರ್ಮನ್ ವಿನಯಚಂದ್ರ ಮಹೇಂದ್ರಕರ್, ದೇಶವು ಬರಲಿರುವ ದಿನಗಳಲ್ಲಿ ತಂತ್ರಜ್ಞಾನ ಭರಿತ ಭಾರತವಾಗಲಿದೆ. ಶಿಕ್ಷಣ, ಆರ್ಥಿಕ, ಸಾಮಾಜಿಕ ರಂಗಗಳಲ್ಲಿ ತಂತ್ರಜ್ಞಾನವು ಸಂಪತ್ಭರಿತವಾಗಲಿದೆ. ಇದು ಪ್ರಪಂಚದಲ್ಲಿಯೇ ಬಲಿಷ್ಠ ತಂತ್ರಜ್ಞಾನ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ ಎಂದರು.
ಶೃಂಗಸಭೆಯಲ್ಲಿ 147 ಸ್ಟಾರ್ಟಪ್ಗಳು 500ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಕನಕದಾಸ ಶಿಕ್ಷಣ ಸಮಿತಿಯ ಚೇರ್ಮನ್ ರವೀಂದ್ರನಾಥ ದಂಡಿನ, ಐಬಿಎಂಆರ್ ಸಂಸ್ಥೆಯ ಟ್ರಸ್ಟಿ ಸುಮಾ ಮಹೇಂದ್ರಕರ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ, ಐಬಿಎಂಆರ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸಂಜನಾ ಮಹೇಂದ್ರಕರ, ಎಸ್ಟಿಪಿಐ ನಿರ್ದೇಶಕ ಶಶಿಕುಮಾರ, ಪವನ ಜೈನ್, ಡಾ. ವೆಂಕಟೇಶ ಅರಕೇರಿ, ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ, ಕೆಡಿಇಎಂನ ವೆಂಕಟೇಶ ದೇಶಪಾಂಡೆ, ಇತರರು ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಂಡರು.