ಹುಬ್ಬಳ್ಳಿಯಲ್ಲಿ (Felicitation) ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು. ಚನ್ನವೀರ ಮುಂಗುರವಾಡಿ, ಪ್ರಕಾಶ ಬಾಫಣಾ, ಪ್ರಶಾಂತ ಸೂರಣಗಿ, ಯು.ಜಿ. ಬಂಗಾರಿ, ಮಹೇಂದ್ರ ದಲಬಂಜನ ಇದ್ದರು.
ಹುಬ್ಬಳ್ಳಿ: ಹೈದರಾಬಾದ್ ನಗರ (Felicitation) ಪೊಲೀಸ್ ಆಯುಕ್ತರಾಗಿರುವ ಐಪಿಎಸ್ ಅಧಿಕಾರಿ ಹುಬ್ಬಳ್ಳಿಯ ವಿಶ್ವನಾಥ ಸಜ್ಜನರ ಅವರ ಅಭಿನಂದನಾ ಸಮಾರಂಭ ನ. 30ರಂದು ಸಂಜೆ 4 ಗಂಟೆಗೆ ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ವಿಶ್ವನಾಥ ಸಜ್ಜನರ ಗೆಳೆಯರ ಬಳಗದ ಚನ್ನವೀರ ಮುಂಗುರವಾಡಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷ ಆಡಳಿತ ಹಾಗೂ ಪ್ರಾಮಾಣಿಕ ಸೇವೆಗೆ ಸಜ್ಜನರ ಹೆಸರಾಗಿದ್ದಾರೆ. ಹೈದರಾಬಾದ್ ನಗರ ಪೊಲೀಸ್ ಆಯುಕ್ತರಾದ ಬಳಿಕ ಮೊದಲ ಬಾರಿ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಕೆಎಲ್ಇ ತಾಂತ್ರಿಕ ವಿವಿ ಗೇಟ್ನಿಂದ ಅಭಿನಂದನಾ ಸಮಾರಂಭ ನಡೆಯುವ ವೇದಿಕೆಯವರಿಗೆ ಅವರನ್ನು ತೆರೆದ ಜೀಪ್ನಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಗುವುದು ಎಂದು ಹೇಳಿದರು.
ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಸಜ್ಜನರ ಹುಬ್ಬಳ್ಳಿಯವರೇ ಆಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ನಾವೆಲ್ಲ ಹುಬ್ಬಳ್ಳಿ ಜೆಜಿ ವಾಣಿಜ್ಯ ಕಾಲೇಜ್ ವಿದ್ಯಾರ್ಥಿಗಳು. ಪಠ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಟ್ಟಿಗೆ ಸೇರುತ್ತಿದ್ದೇವು. ನಮ್ಮ ಗೆಳೆಯ ಇಂದು ಉನ್ನತ ಹುದ್ದೆ ಅಲಂಕರಿಸಿರುವುದು ಖುಷಿ ತಂದಿದೆ. ಸಂಪೂರ್ಣ ಆಂಧ್ರ ಪ್ರದೇಶದಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ ಎಂದರು
ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸುವರು. ಜನಪ್ರತಿನಿಧಿಗಳು, ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಉಪಸ್ಥಿತರಿರುವರು. ಸನ್ಮಾನಕ್ಕಿಂತ ಜನರೊಂದಿಗೆ ಸಮಾಲೋಚನೆ ನಡೆಸಲು ಇಷ್ಟಪಡುವುದಾಗಿ ಸಜ್ಜನರ ಹೇಳಿದ್ದಾರೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಕಾಶ ಬಾಫಣಾ, ಪ್ರಶಾಂತ ಸೂರಣಗಿ, ಯು.ಜಿ. ಬಂಗಾರಿ, ಮಹೇಂದ್ರ ದಲಬಂಜನ ಇದ್ದರು.