ಹುಬ್ಬಳ್ಳಿ: ಗೋವಾದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಯುವ ಈಜುಪಟುಗಳಿಗೆ ನಗರದ ಎಂ.ಆರ್. ಅಕಾಡೆಮಿ ಹಾಗೂ ನವೀನ್ ಪಾರ್ಕ್ ನಿವಾಸಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ, ಬೇರೆ ರಾಜ್ಯಕ್ಕೆ ಹೋಗಿ ಸಾಧನೆ ಮಾಡುವ ಮೂಲಕ ಮಕ್ಕಳು ನಗರಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಹಾಗೂ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದರು.
ಮಕ್ಕಳು ಪರಿಶ್ರಮ, ಶಿಸ್ತು ಮತ್ತು ಕ್ರೀಡಾಸಕ್ತಿಯಿಂದ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕ್ರೀಡೆಯಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ ಎಂದರು.
1 ಕಿ.ಮೀ. ಈಜು ಸ್ಪರ್ಧೆಯಲ್ಲಿ ಐರಾ ನಾಗಠಾಣ ಪ್ರಥಮ, 19 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ವೇಗದ ಮಹಿಳಾ ಈಜುಪಟು ಎಂಬ ಗೌರವ ಗಳಿಸಿದ್ದಾರೆ.
ಜೇಡನ್ ಆರ್., ಎಂ. ಶಿವರಾಮ ಪ್ರಸಾದ್ ಹಾಗೂ ಓಂಕಾರ ಹಬೀಬ ಸ್ಥಾನ ಪಡೆದಿದ್ದಾರೆ. ಅನ್ಮೋಲ್ ಪಾಟೀಲ, ಪರಶುರಾಮ ಬೀಳಗಿ 1 ಕಿ.ಮೀ. ಹಾಗೂ ರೆವಿಲಾ ನಾಗಠಾಣ, ಎಂ. ಸಂಯುಕ್ತಾ ಮತ್ತು ಅರ್ಡಾಸ್ ಪುಪ್ನೇಜಾ 250 ಮೀಟರ್ ಈಜು ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಪೋಷಕರು, ತರಬೇತುದಾರರು ಹಾಗೂ ಸಂಘದ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.