farmer protest ಹುಬ್ಬಳ್ಳಿಯ ವಿಕಾಸನಗರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ಎದುರು ರೈತರು ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ಆಗಮಿಸಿದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಹುಬ್ಬಳ್ಳಿ: farmer protest ಬೆಂಬಲ ಬೆಲೆ ಯೋಜನೆಯಡಿ ಹೆಸರು ಮಾರಾಟ ಮಾಡಿದ 95 ರೈತರಿಗೆ ಹಣ ಪಾವತಿಸದೆ ಅನ್ಯಾಯ ಮಾಡಿರುವುದು ಸರಿಯಲ್ಲ. ಕಷ್ಟದಲ್ಲಿರುವ ಬೆಳೆಗಾರರಿಗೆ ಹಣ ಬಿಡುಗಡೆ ಮಾಡಬೇಕೆಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದರು.
ಇಲ್ಲಿಯ ವಿಕಾಸನಗರದ ರಾಜ್ಯ ಸಹಕಾರ ಮಾರಾಟ ಮಂಡಳ ಎದುರು ಕರ್ನಾಟಕ ರೈತ ಸೇನೆ ಆಶ್ರಯದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು ಹೋರಾಟಕ್ಕೆ ಬೆಂಬಲ ನೀಡಿದರು.
ಕಳೆದ 15 ದಿನದಿಂದ ಬ್ಯಾಹಟ್ಟಿ, ಸುಳ್ಳ, ಕಿರೇಸೂರ, ಅಮರಗೋಳ ಭಾಗದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 95 ರೈತರ ಬ್ಯಾಂಕ್ ಖಾತೆಗೆ 87 ಲಕ್ಷ ರೂ. ಬೆಂಬಲ ಬೆಲೆ ಹಣ ಪಾವತಿ ಮಾಡಬೇಕಾಗಿದೆ. ಮಾರಾಟ ಮಂಡಳ ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು.
ಈ ಹಿಂದೆ ಇಂತಹ ಸಮಸ್ಯೆಗಳು ಎದುರಾದಾಗ ಸರ್ಕಾರವೇ ಪರಿಹರಿಸಿದ ಅನೇಕ ಉದಾಹರಣೆಗಳು ಇವೆ. ಸರ್ಕಾರಕ್ಕೆ ಇದು ದೊಡ್ಡ ಸಮಸ್ಯೆಯಲ್ಲ. ಅಧಿಕಾರಿಗಳ ಮಾತು ಕೇಳದೆ ರೈತರ ಬೇಡಿಕೆಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದರು.
ಕರ್ನಾಟಕ ರೈತ ಸೇನೆಯ ಗುರು ರಾಯನಗೌಡರ, ವಿರೂಪಾಕ್ಷ ಪಾಯನ್ನವರ, ಪರಮೇಶ್ವರಪ್ಪ ಹಳ್ಯಾಳ, ಅಶೋಕ ಮತ್ತಿಹಳ್ಳಿ, ಬಸಯ್ಯ ಪೂಜಾರ, ಸುಭಾಸ ಕೊಂಡಿಕೊಪ್ಪ, ನಾಗರಾಜ ಗಿಡ್ಡನ್ನವರ, ಗುರಪ್ಪ ಸ್ವಾದಿ, ಮೌಲಾಸಾಬ್ ನವಲೂರ, ಜಗದೀಶ ರೂಗಿ, ಬಸಯ್ಯ ವಿರಕ್ತಮಠ, ಬಸಣ್ಣ ದ್ಯಾಮಕ್ಕನವರ, ಪ್ರಭು ಬುಳಗಣ್ಣನವರ, ಉಪಸ್ಥಿತರಿದ್ದರು.