ನಿರಂತರ ವಿದ್ಯುತ್ ಪೂರೈಸಲು ಆಗ್ರಹಿಸಿ farmer protestವಿವಿಧ ಗ್ರಾಮಗಳ ರೈತರು, ಹುಬ್ಬಳ್ಳಿಯ ತಬೀಬ್‌ಲ್ಯಾಂಡ್‌ನ ಹೆಸ್ಕಾಂ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: ಕೃಷಿ ಭೂಮಿಗೆ ಸಮರ್ಪಕ ಮತ್ತು ನಿರಂತರ ವಿದ್ಯುತ್ ಪೂರೈಸಲು ಆಗ್ರಹಿಸಿ ಹಳೇ ಹುಬ್ಬಳ್ಳಿ, ಮಾವನೂರ, ಕಟ್ನೂರ, ಗಿರಿಯಾಲ, ಬುಡರಸಿಂಗಿ, ಬೆಳಗಲಿ, ಇನಾಮ್‌ವೀರಾಪೂರ, ಕರಡಿಕೊಪ್ಪ, ಕುರಡಿಕೇರಿ, ಬೊಮ್ಮಸಮುದ್ರ ಸೇರಿದಂತೆ ವಿವಿಧ ಗ್ರಾಮಗಳ farmer protest ರೈತರು, ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಹಳೇ ಹುಬ್ಬಳ್ಳಿ, ನ್ಯೂ ಇಂಗ್ಲಿಷ್ ಸ್ಕೂಲ್, ಹಿರೇಪೇಟ, ಘಂಟಿಕೇರಿ ಮುಖಾಂತರವಾಗಿ ಟ್ರಾೃಕ್ಟರ್, ಚಕ್ಕಡಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ತಬೀಬ್‌ಲ್ಯಾಂಡ್‌ನಲ್ಲಿರುವ ಹೆಸ್ಕಾಂ ಕಚೇರಿ ಮುಂದೆ ಧರಣಿ ಕುಳಿತರು.
ಪ್ರತಿನಿತ್ಯ ಅನಿಯಮಿತವಾಗಿ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಕನಿಷ್ಠ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತಿಲ್ಲ. ಸಾಲ ಮಾಡಿ ಬೆಳೆದ ಬೆಳೆಗಳು ಹಾಳಾಗುತ್ತಿವೆ. ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಕುರಿತು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸೇರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಾವನೂರ ಗ್ರಾಮದ ರೈತ ಈರಣ್ಣ ಜಡಿ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 14ಗಂಟೆ ನಿರಂತರ ಮತ್ತು ತ್ರಿಫೇಸ್ ವಿದ್ಯುತ್ ಕೊಡುತ್ತಿಲ್ಲ. ವಿದ್ಯುತ್ ಪರಿವರ್ತಕ ಮತ್ತು ಕೃಷಿ ಪಂಪ್‌ಸೆಟ್‌ಗಳು ಹಾಳಾದರೆ ದುರಸ್ತಿ ಮಾಡುತ್ತಿಲ್ಲ. ಇದಕ್ಕೂ ಹೆಸ್ಕಾಂ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ. ಇದರಿಂದ ನಮ್ಮ ಬದುಕು ಬೀದಿಗೆ ಬಿದ್ದಿದೆ. ನಮ್ಮ ಬೇಡಿಕೆ ಈಡೇರಿಸುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಕೊಡಬೇಕು. ವಿದ್ಯುತ್ ಕಡಿತ ನಿಲ್ಲಿಸಬೇಕು. ಕೃಷಿ ವಲಯದಲ್ಲಿ ಸುಟ್ಟು ಹೋಗಿರುವ ವಿದ್ಯುತ್ ಪರಿವರ್ತಕಗಳನ್ನು ವಿಳಂಬ ಮಾಡದೇ ಬದಲಾಯಿಸಿಕೊಡಬೇಕು. ರೈತರ ಜಮೀನಿನಲ್ಲಿ ಎಲ್‌ಟಿ ಲೈನ್‌ಗಳನ್ನು ಹೊಸದಾಗಿ ದುರಸ್ತಿ ಮಾಡಿ ಜೋತುಬಿದ್ದ ಕೇಬಲ್‌ಗಳನ್ನು ಸರಿ ಮಾಡಬೇಕು. ರೈತರ ಟಿಸಿಯಲ್ಲಿ ಹಳೇ ವೈಯರ್ ಮತ್ತು ಹಳೇ ಫ್ಯೂಜ್ ತೆಗೆದು ಹೊಸದಾಗಿ ಅಳವಡಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ ಮನವಿಯನ್ನು ಹೆಸ್ಕಾಂ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ರವಾನಿಸಲಾಯಿತು.
ರೈತರಾದ ಶಿವಾನಂದ ಹೊಸೂರ, ಮುದರಡ್ಡಿ ರಡ್ಡೇರ, ಅಶೋಕ ಹೊಸೂರ, ರಾಜು ಕೋರ್ಯಾಣಮಠ, ಸಹದೇವಪ್ಪ ಸುಡಕೇನವರ, ಗೋವಿಂದರಾವ್ ಸೋಳಂಕಿ, ಬಸಪ್ಪ ಹೂಗಾರ, ಜಗದೀಶ ಗಿರಿಯಮ್ಮನವರ, ವೀರಭದ್ರಯ್ಯ ರಾಯನಗೌಡ ಸೇರಿದಂತೆ ಬಹಳಷ್ಟು ರೈತರು ಭಾಗವಹಿಸಿದ್ದರು.