ಧಾರವಾಡ ತಾಲೂಕಿನ ಹಿರೇಮಲ್ಲಿಗವಾಡ ಕೆಎಚ್ಬಿ ಲೇಔಟ್ನಲ್ಲಿ ಟ್ರ್ಯಾಕ್ಟರ್ ನೇಗಿಲು ಹೊಡೆಯುತ್ತಿರುವ ರೈತ.
ಧಾರವಾಡ: ಕರ್ನಾಟಕ ಗೃಹಮಂಡಳಿಯಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ನೊಂದ ರೈತ ಟ್ರ್ಯಾಕ್ಟರ್ ಬಳಸಿ ನೇಗಿಲು ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ!
ತಾಲೂಕಿನ ಹಿರೇಮಲ್ಲಿಗವಾಡ ಗ್ರಾಮದ ಉಳವಪ್ಪ ಒಡೆಯರ ಕೆಎಚ್ಬಿ ವಿರುದ್ಧ ತೊಡೆ ತಟ್ಟಿರುವ ರೈತ. ಇವರ ತಂದೆ ದ್ಯಾಮಪ್ಪ ಒಡೆಯರ ಮಾಲೀಕತ್ವದಲ್ಲಿ 5 ಎಕರೆ 12 ಗುಂಟೆ ಜಮೀನಿತ್ತು. 2005- 06ರಲ್ಲಿ ನಿವೇಶನ ಅಭಿವೃದ್ಧಿಪಡಿಸಲು ಗೃಹಮಂಡಳಿ ಜಮೀನು ಸ್ವಾಧಿನಪಡಿಸಿಕೊಳ್ಳಲಾಗಿತ್ತು. ಆದರೆ, ತಮಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಅಲ್ಲದೆ, ಜಮೀನು ಅಭಿವೃದ್ಧಿಪಡಿಸಿದ ನಂತರ ವಾಗ್ದಾನದಂತೆ ತಮಗೆ ನಿವೇಶನಗಳನ್ನೂ ನೀಡಿಲ್ಲ ಎಂಬುದು ರೈತ ಉಳವಪ್ಪ ಒಡೆಯರ ಆರೋಪ.
ತಮಗೆ ಸಿಗಬೇಕಾದ ಪರಿಹಾರಕ್ಕಾಗಿ ಉಳವಪ್ಪ ಕೆಎಚ್ಬಿ ಕಚೇರಿಗೆ ವರ್ಷಗಟ್ಟಲೇ ಅಲೆದಾಡಿದ್ದಾರೆ. ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿದ್ದರಿಂದ ನೇಗಿಲು ಹೊಡೆದಿದ್ದೇನೆ ಎಂದು ಉಳವಪ್ಪ ಪ್ರತಿಕ್ರಿಯಿಸಿದ್ದಾರೆ.