farmer conference ಹುಬ್ಬಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ರೈತ ಜಾಗೃತಿ ಸಮಾವೇಶವನ್ನು ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಡಾ. ವಾಸುದೇವ ಮೇಟಿ ಉದ್ಘಾಟಿಸಿದರು. ಮಂಟೂರಿನ ಶ್ರೀ ಮಹಾಂತಲಿಂಗ ಸ್ವಾಮೀಜಿ, ರಾಜಣ್ಣ ಕೊರವಿ, ಗುರುಪಾದಪ್ಪ ಬಂಕದ, ಶಂಕರಗೌಡ್ರ ದೊಡ್ಡಮನಿ, ಸಿದ್ದಯ್ಯ ಕಟ್ನೂರಮಠ, ಶಿವಾನಂದ ಮಾಯಕಾರ, ಶಿವಾನಂದ ಬೆಂತೂರ, ಇತರರು ಇದ್ದರು. 
ಧಾರವಾಡ

farmer conference ಪರಿಹಾರ ಕೊಡಿ ಇಲ್ಲವೇ ಅಧಿಕಾರ ಬಿಡಿ

ಪ್ರಮುಖ ಮುಖ್ಯಾಂಶಗಳು

  • ರೈತ ಜಾಗೃತಿ ಸಮಾವೇಶದಲ್ಲಿ ಒಕ್ಕೋರಲ ಆಗ್ರಹ
  • ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ
ಹುಬ್ಬಳ್ಳಿ: farmer conference ರಾಜ್ಯ ಹಾಗೂ ದೇಶದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷದವರು ಹಸಿರು ಟವಲ್​ ಹಾಕಿಕೊಂಡು ರೈತರಿಗೆ ಜೈ ಎಂದಿದ್ದಾರೆ. ಆದರೆ, ಇದುವರೆಗೂ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ. ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ಲ. ಆಡಳಿತ ವ್ಯವಸ್ಥೆಯ ಕಣ್ಣು ತೆರೆಸಲು ಸಂಘಟನೆ ಮಾಡಲಾಗುತ್ತಿದೆ ಎಂದು ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಡಾ. ವಾಸುದೇವ ಮೇಟಿ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಇಲ್ಲಿಯ ಸವಾಯಿ ಗಂಧರ್ವ​ ಹಾಲ್​ನಲ್ಲಿ ಗುರುವಾರ ಏರ್ಪಡಿಸಿದ್ದ ರೈತ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವಾಘಾ ಗಡಿಯಲ್ಲಿ ನೂರಾರು ರೈತರು ಬೆಳೆಗೆ ಯೋಗ್ಯ ಬೆಲೆ ನೀಡಿ ಎಂದು ಹೋರಾಡಿ ಜೀವ ಕಳೆದುಕೊಂಡರೂ ಪ್ರಧಾನಿ ಪರಿಹಾರ ನೀಡಿಲ್ಲ. ರೈತರ ಮತಗಳನ್ನು ಪಡೆದು ಪ್ರಧಾನಿಯಾಗಿ ಈಗ ಅನ್ನದಾತನನ್ನು ಮರೆತಿದ್ದಾರೆ ಎಂದು ದೂರಿದರು.
ಬೆಳೆಗೆ ಯೋಗ್ಯ ಬೆಲೆ, ಹಗಲು ಹೊತ್ತು ವಿದ್ಯುತ್​ ಪೂರೈಕೆ, ಕೃಷಿ ಸಾಲ ಮನ್ನಾ, ಬಿತ್ತನೆ ಬೀಜ, ಗೊಬ್ಬರಕ್ಕೆ ಸಬ್ಸಿಡಿ ನೀಡುವುದು ಸೇರಿದಂತೆ ಎಲ್ಲ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದ ಅವರು, ಬೆಳೆಗೆ ಯೋಗ್ಯ ಬೆಲೆ ಕೊಡಲು ಆಗದಿದ್ದರೆ ಸರ್ಕಾರಗಳು ಏಕೆ ಇರಬೇಕು? ಎಂದು ಪ್ರಶ್ನಿಸಿದರು.
ಮಹದಾಯಿ ಏಕೆ ಆಗುತ್ತಿಲ್ಲ
ಧಾರವಾಡ ಜಿಲ್ಲೆಯಲ್ಲಿ ನೀರಿಲ್ಲದೇ ರೈತರು ಸಮಸ್ಯೆಯಲ್ಲಿದ್ದಾರೆ. ದಶಕಗಳಿಂದ ಮಹದಾಯಿ ಸಮಸ್ಯೆ ಬಗೆ ಹರಿದಿಲ್ಲ. ಈ ಭಾಗದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಹದಾಯಿ ಯೋಜನೆ ಜಾರಿಗೆ ಮುತುವರ್ಜಿ ವಹಿಸುತ್ತಿಲ್ಲ. ರೈತರಿಗೆ ಮೋಸ ಮಾಡಿ ಅಧಿಕಾರದಲ್ಲಿದ್ದಾರೆ ಎಂದು ಆರೋಪಿಸಿದ ಅವರು, ರೈತರ ಸಹನೆ ಮೀರಿದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಸೇನೆಯ ಕುಂದಗೋಳ ತಾಲೂಕು ಅಧ್ಯಕ್ಷ ಗುರುಪಾದಪ್ಪ ಬಂಕದ ಮಾತನಾಡಿ, ರೈತರು ತಮ್ಮ ಬೇಡಿಕೆಗಾಗಿ ಎಲ್ಲ ಇಲಾಖೆಗಳ ಮುಂದೆ ಪ್ರತಿಭಟನೆ ಮಾಡುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ. ಯಾವ ಅಧಿಕಾರಿ, ರಾಜಕಾರಣಿಯೂ ರೈತರ ಸಮಸ್ಯೆ ಕೇಳುತ್ತಿಲ್ಲ ಎಂದು ದೂರಿದರು.
ವೋಟ್​ ಕೇಳುವಾಗ ಪ್ರತಿಯೊಬ್ಬರೂ ನಾನೂ ರೈತನ ಮಗ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡುವುದಿಲ್ಲ. ರೈತರಿಗೆ ಪರಿಹಾರ ಕೊಡಿ ಇಲ್ಲವೇ ಅಧಿಕಾರದಿಂದ ತೊಲಗಿ ಎಂದು ಗುಡುಗಿದರು.
ಅಣ್ಣಿಗೇರಿ ದಾಸೋಹ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ, ಮಂಟೂರಿನ ಆನಂದ ಆಶ್ರಮದ ಶ್ರೀ ಮಹಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಂಕರಗೌಡ್ರ ದೊಡ್ಡಮನಿ, ಐ.ಸಿ. ಗೋಕುಲ, ರಮೇಶ ಮಹದೇವಪ್ಪನವರ, ಸಿದ್ದಯ್ಯ ಕಟ್ನೂರಮಠ, ಶಿವಾನಂದ ಮಾಯಕಾರ, ರಾಮನಗೌಡ ಪರ್ವತಗೌಡ್ರ, ಶಿವಾನಂದ ಬೆಂತೂರ, ರಾಜಣ್ಣ ಕೊರವಿ, ಚನ್ನಬಸನಗೌಡ್ರ, ಗಂಗಾಧರ, ವಿವಿಧ ಜಿಲ್ಲೆ, ತಾಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪುಷ್ಪಾ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಈಶ್ವರಪ್ಪ ಜಾಯನಗೌಡ್ರ ಸ್ವಾಗತಿಸಿದರು. ಸಮಾವೇಶಕ್ಕೂ ಮೊದಲು ಚನ್ನಮ್ಮ ವೃತ್ತದಿಂದ ರೈತರು ಮೆರವಣಿಗೆ ನಡೆಸಿದರು.