ಹುಬ್ಬಳ್ಳಿ ಸಂತೋಷನಗರ (Fan park) ಜೆ.ಕೆ. ಸ್ಕೂಲ್ ಬಳಿಯ ಬಿಡಿಕೆ ಮೈದಾನದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಮೈದಾನದಲ್ಲಿ ಕುಳಿತು ಕ್ರಿಕೆಟ್ ಪಂದ್ಯ ವೀಕ್ಷಿಸುವಂಥ (Fan park) ಅನುಭವ ನೀಡುವ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಫ್ಯಾನ್ ಪಾರ್ಕ್ ಅನ್ನು ಹುಬ್ಬಳ್ಳಿಯಲ್ಲಿ ತೆರೆಯಲಾಗುತ್ತಿದೆ. ಮೇ 9 ಮತ್ತು 10ರಂದು ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳ ನೇರಪ್ರಸಾರವನ್ನು ಇಲ್ಲಿ ಬೃಹತ್ ಪರದೆಯ ಮೇಲೆ ವೀಕ್ಷಿಸಬಹುದು.
ಸಂತೋಷನಗರ (ಗೋಪನಕೊಪ್ಪ) ಜೆ.ಕೆ. ಸ್ಕೂಲ್ ಬಳಿಯ ಬಿಡಿಕೆ ಮೈದಾನದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿವೆ. ಮೇ 9ರಂದು ಸಂಜೆ 7.30 ಜೈಪುರನಲ್ಲಿ ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟನ್ಸ್, 10ರಂದು ಮಧ್ಯಾಹ್ನ 3.30ಕ್ಕೆ ಚನ್ನೈನಲ್ಲಿ ಚನ್ನೈ ಸೂಪರ್ ಕಿಂಗ್ಸ್-ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸಂಜೆ 7.30ಕ್ಕೆ ರಾಯಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಮುಂಬೈ ಇಂಡಿಯನ್ಸ್ ಸೆಣಸಲಿದೆ. ಫ್ಯಾನ್ ಪಾರ್ಕ್ನಲ್ಲಿ ಈ ಪಂದ್ಯದ ನೇರ ಪ್ರಸಾರವನ್ನು 32 ಅಡಿ ಅಗಲ ಹಾಗೂ 18 ಅಡಿ ಉದ್ದದ ಬೃಹತ್ ಎಲ್ಇಡಿ ಪರದೆಯಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಐಪಿಎಲ್ ಪಂದ್ಯಗಳು ನಡೆಯದ ಮಹಾನಗರಗಳಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆ ಮಾಡುತ್ತಿದೆ. ಇದು ಜನರಿಗೆ ಮೈದಾನದಲ್ಲಿಯೇ ಕುಳಿತು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವಂಥ ಅನುಭವ ನೀಡಲಿದೆ. ಇಲ್ಲಿ ಆಸನ ವ್ಯವಸ್ಥೆ ಇರುವುದಿಲ್ಲ. ಪಾರ್ಕ್ ಕಲ್ಪನೆಯಲ್ಲಿ ಜನ ನಿಂತುಕೊಂಡೇ ಕ್ರಿಕೆಟ್ ಪಂದ್ಯದ ನೇರ ಪ್ರಸಾರವನ್ನು ಆನಂದಿಸಬೇಕು. ಐಪಿಎಲ್ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಹೋಗಲಾರದವರು ಈ ವ್ಯವಸ್ಥೆಯನ್ನು ಆನಂದಿಸಲಿದ್ದಾರೆ. ಕ್ರಿಕೆಟ್ ವೀಕ್ಷಣೆ ಜತೆಗೆ ಆಹಾರ ಮಳಿಗೆ, ಗೇಮ್ ಝೋನ್, ಇತ್ಯಾದಿಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ವರ್ಷ (2026) 19ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿ ಮಾರ್ಚ್ 28ರಿಂದ ಆರಂಭಗೊಂಡಿದ್ದು ಮೇ 31ರವರೆಗೆ ನಡೆಯಲಿದೆ. ಮೇ 9 ಹಾಗೂ 10ರಂದು ಹುಬ್ಬಳ್ಳಿ ಜತೆ ಮಂಡಿ (ಹಿಮಾಚಲ ಪ್ರದೇಶ), ರಾಜಕೋಟ, ಗ್ವಾಲಿಯರ್, ಪುದುಚೇರಿ, ಗೋಲಘತ್ (ಆಸ್ಸಾಂ)ನಲ್ಲಿ ಫ್ಯಾನ್ ಪಾರ್ಕ್ ಅಸ್ತಿತ್ವಕ್ಕೆ ತರಲಾಗುತ್ತಿದೆ. ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿರುತ್ತದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ಹುಬ್ಬಳ್ಳಿಯಲ್ಲಿ ಮೊದಲ ಬಾರಿ 2016ರಲ್ಲಿ ದೇಶಪಾಡೆನಗರ ಕರ್ನಾಟಕ ಜಿಮ್ಾನಾ ಮೈದಾನದಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದೆ. 2017ರಲ್ಲಿಯೂ ಇಲ್ಲಿಯೇ ಆಯೋಜಿಸಲಾಗಿತ್ತು. ಇದಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2025ರಲ್ಲಿ ಬಿಡಿಕೆ ಮೈದಾನಲ್ಲಿ ಆಯೋಜಿಸಿದ್ದಾಗ ಒಂದು ದಿನ ಮಳೆ ಬಂದು ಅಸ್ತವ್ಯಸ್ತತೆ ಉಂಟಾಗಿತ್ತು. ಈ ವಾರ ಮಳೆಯಾಗುವ ಮುನ್ಸೂಚನೆಯನ್ನು ಈಗಾಗಲೇ ಹವಾಮಾನ ಇಲಾಖೆ ನೀಡಿದೆ.