ಧರ್ಮ ಸಂಗಮ ಸಮಾವೇಶ 
ಧಾರವಾಡ

ಜಾತ್ರಾ ಮಹೋತ್ಸವ ಧರ್ಮ ಸಂಗಮ ಸಮಾವೇಶ

ಧಾರವಾಡ: ವಿಭಿನ್ನ ಧರ್ಮ ಪೀಠಗಳು ಹಾಗೂ ಮಠ- ಮಂದಿರಗಳ ಮೂಲಕ ನಾಡಿನಾದ್ಯಂತ ಜರುಗುವ ಜಾತ್ರೆಗಳ ಹಿಂದೆ ಧರ್ಮ, ಸಂಸತಿ, ಸಂಸ್ಕಾರಗಳನ್ನು ಉಳಿಸುವ ಉದಾತ್ತ ಉದ್ದೇಶವಿದೆ ಎಂದು ನಗರದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಸಂಗಮ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವ ಕುಲವು ಧರ್ಮ, ಸಂಸ್ಕೃತಿ, ಸಂಸ್ಕಾರಗಳ ನೆಲೆಯಲ್ಲಿ ಬದುಕಲು ಕಲಿತಾಗ ನಿತ್ಯದ ದಿನಚರಿಯ ಕ್ಷಣಗಳು ಸಂತಸ, ಸಂತೃಪ್ತಿ, ಸಮಾಧಾನದಿಂದ ಕೂಡಿರುತ್ತವೆ ಎಂದರು.
ಹಾಸನ ಜಿಲ್ಲೆಯ ನೊಣವಿನಕೆರೆ ಶ್ರೀ ಸೋಮೇಕಟ್ಟೆ ಕಾಡಸಿದ್ಧೇಶ್ವರಮಠದ ಶ್ರೀ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಯುದ್ಧಗಳಿಂದಾಗಿ ಇಂದು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಅಶಾಂತಿ ನೆಲೆಸಿದೆ. ಅಲ್ಲಿಯ ಜನಮನಗಳು ತಲ್ಲಣಗೊಂಡಿವೆ. ಆದರೆ ಆಧ್ಯಾತ್ಮದ ತವರುಮನೆ ಭಾರತದಲ್ಲಿ ಸದಾಕಾಲವೂ ಶಾಂತಿ, ಸಮಾಧಾನ, ಸಮೃದ್ಧಿ ನೆಲೆಸಲು ಇಲ್ಲಿ ಅವತಾರ ತಾಳಿರುವ ಅನೇಕ ಆಚಾರ್ಯರ, ಶಿವಯೋಗಿಗಳ, ಸಂತರ, ಶರಣರ ತಪೋಶಕ್ತಿಯೇ ಕಾರಣವಾಗಿದೆ ಎಂದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಷ್ಟಿ ಭಾವವನ್ನೇ ಕೇಂದ್ರೀಕರಿಸಿರುವ ದಾಸೋಹದ ಗುಣಗಳಾದ ಹಂಚಿ ತಿನ್ನುವ ವಿಚಾರಗಳನ್ನು ವ್ಯಾಪಕಗೊಳಿಸಿ ಸಾಮಾಜಿಕ ಒಳಿತನ್ನು ಜತೆಗೆ ಆಧ್ಯಾತ್ಮಿಕ ಪ್ರಗತಿಯನ್ನೂ ಸಾಧಿಸಬೇಕೆನ್ನುವುದು ಜಾತ್ರೆಗಳ ಹಿಂದಿನ ಬಹುಮುಖ್ಯ ಉದ್ದೇಶವಾಗಿದೆ ಎಂದರು.
ಕಲಬುಗಿರ್ ಜಿಲ್ಲೆ ಬೆಳಗುಂಪಾ ಬೃಹನ್ಮಠದ ಶ್ರೀಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಸವದತ್ತಿ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಾಸನ ಜಿಲ್ಲೆ ಹೆಗ್ಗಡಹಳ್ಳಿಮಠದ ಶ್ರೀ ಷಡ್ಭಾವರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೊರಬ ಜಡಿಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಳೇಹುಬ್ಬಳ್ಳಿ- ಹಳ್ಯಾಳ ಪಂಚಗೃಹ ಹಿರೇಮಠದ ನಿಯೋಜಿತ ಪಟ್ಟಾಧ್ಯಕ್ಷ ಶ್ರೀ ರೇಣುಕಪ್ರಸಾದ ದೇವರು ಇದ್ದರು.
ಜೆಡಿಎಸ್​ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಕಾಂಗ್ರೆಸ್​ ಮುಖಂಡ ಈಶ್ವರ ಶಿವಳ್ಳಿ, ಗ್ರಾ.ಪಂ. ಮಾಜಿ ಸದಸ್ಯ ಬಸವರಾಜ ಇದ್ಲಿ, ಹುಸೇನಖಾನ್​ ಹುಬ್ಬಳ್ಳಿ, ಗಾಯಕ ಜಗದೀಶ, ತಬಲಾ ಕಲಾವಿದ ಮಲ್ಲಿಕಾರ್ಜುನ ಕೆರಕನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಲೇಖಕ ಗುರುಮೂತಿರ್ ಯರಗಂಬಳಿಮಠ ಸ್ವಾಗತಿಸಿದರು. ಸೋಮಲಿಂಗಶಾಸ್ತ್ರ ಗುಡ್ಡದಮಠ ವಂದಿಸಿದರು.
* ಪುರಾಣ ಮಂಗಲ: ಮಾ. 8ರಿಂದ ನಡೆದಿದ್ದ ಕಲಬುಗಿರ್ ಶರಣಬಸವೇಶ್ವರರ ಪುರಾಣ ಪ್ರವಚನ ಮಂಗಲಗೊಂಡಿತು. ಪ್ರವಚನ ನೀಡಿದ ಸವದತ್ತಿ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರನ್ನು ಅಮ್ಮಿನಬಾವಿ ಮಠದ ಉಭಯ ಶ್ರೀಗಳು ಗೌರವಿಸಿದರು.