ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Congress).
- ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆಗೆ ಯತ್ನ
- ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದೆ.
- ಈ ಭಾಗದಲ್ಲಿಯೂ ಅಭಿವೃದ್ಧಿ ಕಾರ್ಯಗಳಾಗಬೇಕೆಂದು ಆಗ್ರಹಿಸುತ್ತೇವೆ.
ಹುಬ್ಬಳ್ಳಿ : ದೇಶ ಕಾಂಗ್ರೆಸ್ (Congress) ಮುಕ್ತವಾಗುತ್ತಿದ್ದರೂ ಆ ಪಕ್ಷದವರ ವರ್ತನೆ ಬದಲಾಗುತ್ತಿಲ್ಲ. ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ಅವರಿಗೆ ವಿಶ್ವಾಸ ಇಲ್ಲ. ತಮ್ಮ ಪರವಾಗಿ ತೀರ್ಪು ಬಂದರೆ ಮಾತ್ರ ಸಂವಿಧಾನ ಮತ್ತು ನ್ಯಾಯಾಂಗವನ್ನು ಒಪ್ಪುವ ಕಾಂಗ್ರೆಸ್ಸಿಗರು, ತಮ್ಮ ವಿರುದ್ಧ ತೀರ್ಪು ಬಂದರೆ ವ್ಯವಸ್ಥೆ ಸರಿ ಇಲ್ಲವೆಂದು ಕೂಗಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲಿನ ದರ್ಗಾದ ಸಮೀಪದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆಗೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಲೋಕಸಭೆ ಸ್ಪೀಕರ್ಗೆ ನೋಟಿಸ್ ನೀಡಿವೆ.
ಈ ನೋಟಿಸ್ಗೆ ಕರ್ನಾಟಕದ ಕಾಂಗ್ರೆಸ್ ಸಂಸದರಾದ ಹಾಸನದ ಶ್ರೇಯಶ್ ಪಾಟೀಲ, ದಾವಣಗೆರೆಯ ಪ್ರಭಾ ಮಲ್ಲಿಕಾರ್ಜುನ ಹಾಗೂ ರಾಯಚೂರಿನ ಜಿ. ಕುಮಾರನಾಯ್ಕ ಅವರೂ ಸಹಿ ಮಾಡಿದ್ದಾರೆ ಎಂದರು.
ತಮ್ಮ ಪರ ತೀರ್ಪು ನೀಡಲಿಲ್ಲವೆಂಬ ಕಾರಣಕ್ಕೆ ನ್ಯಾಯಮೂರ್ತಿಗಳ ವಿರುದ್ಧವೇ ವಾಗ್ದಂಡನೆಗೆ ಮುಂದಾಗಿರುವುದನ್ನು ಗಮನಿಸಿದರೆ ಕಾಂಗ್ರೆಸ್ನವರಿಗೆ ನ್ಯಾಯಾಂಗದ ಮೇಲೆ ಎಷ್ಟು ವಿಶ್ವಾಸವಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ನ್ಯಾಯಾಧೀಶರ ವಿರುದ್ಧ ವಾಗ್ದಂಡನೆಗೆ ಮುಂದಾಗಿರುವುದು ದೇಶದಲ್ಲಿಯೇ ಪ್ರಥಮವಾದದ್ದು ಎಂದರು.
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದೆ. ದ್ವೇಷ ರಾಜಕೀಯದಿಂದ ಗಂಭೀರ ಆರ್ಥಿಕ ಪರಿಸ್ಥಿತಿಯನ್ನು ಕರ್ನಾಟಕ ಎದುರಿಸುತ್ತಿದೆ. ಜನೌಷಧಿ ಕೇಂದ್ರಗಳನ್ನು ಮುಚ್ಚಿಸಲು ಹೊರಟಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಕಪಾಳಮೋಕ್ಷ ಮಾಡಿದೆ. ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಕಟುವಾಗಿ ಟೀಕಿಸಿದೆ ಎಂದು ಹೇಳಿದರು.
ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರುವ ಉತ್ತರ ಕರ್ನಾಟಕವನ್ನು ಪ್ರತ್ಯೇಕಗೊಳಿಸಬೇಕೆಂಬ ಕಾಂಗ್ರೆಸ್ಸಿಗರ ಬೇಡಿಕೆಗೆ ಬಿಜೆಪಿ ಬೆಂಬಲಿಸುವುದಿಲ್ಲ. ಬದಲಾಗಿ, ಈ ಭಾಗದಲ್ಲಿಯೂ ಅಭಿವೃದ್ಧಿ ಕಾರ್ಯಗಳಾಗಬೇಕೆಂದು ಆಗ್ರಹಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್, ರಷ್ಯಾ ಅಧ್ಯಕ್ಷ ಪುಟಿನ್ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಈ ಭಾಗದ ಅಭಿವೃದ್ಧಿ ಬಗ್ಗೆಯೂ ಮಾತನಾಡಲಿ ಎಂದು ಕಾಲೆಳೆದರು.
ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ ಇದ್ದರು.