ನಬಾರ್ಡ್ನಿಂದ ಪ್ರಸಕ್ತ ಹಣಕಾಸು ವರ್ಷದ ಪಿಎಲ್‌ಪಿ ಪುಸ್ತಕ ಬಿಡುಗಡೆ 
ಧಾರವಾಡ

ಜಿಲ್ಲೆಗೆ 16,342.04 ಕೋಟಿ ರೂ. ಸಾಲ ಸಾಮರ್ಥ್ಯದ ಅಂದಾಜು

ಧಾರವಾಡ: ನಬಾರ್ಡ್ ದಿಂದ ಧಾರವಾಡ ಜಿಲ್ಲೆಗೆ ಆದ್ಯತಾ ವಲಯಗಳ ಅಡಿ 16,342.04 ಕೋಟಿ ರೂ. ಸಾಲ ಸಾಮರ್ಥ್ಯ ಅಂದಾಜಿಸಲಾಗಿದೆ. ನಬಾರ್ಡ್ ತಯಾರಿಸಿದ 2026-27ನೇ ಹಣಕಾಸು ವರ್ಷದ ಸಂಭಾವ್ಯ ಸಾಲ ಯೋಜನೆ (ಪಿಎಲ್‌ಪಿ) ಪುಸ್ತಕವನ್ನು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಬ್ಯಾಂಕರ್ಸ್ ಸಮಾಲೋಚನಾ ಸಭೆಯಲ್ಲಿ ಜಿಪಂ ಸಿಇಒ ಭುವನೇಶ ಪಾಟೀಲ ಬಿಡುಗಡೆ ಮಾಡಿದರು.
ಈ ವೇಳೆ ನಬಾರ್ಡ್ ಎಜಿಎಂ ಮಯೂರ್ ಕಾಂಬಳೆ ಮಾತನಾಡಿ, ಸಾಲದ ಸಾಮರ್ಥ್ಯವನ್ನು ಎಂಎಸ್‌ಎಂಇ ವಲಯಕ್ಕೆ ಸರಿಸುಮಾರು ಶೇ. 44, ಕೃಷಿ ವಲಯಕ್ಕೆ ಶೇ. 41.5 ಮತ್ತು ಶಿಕ್ಷಣ, ವಸತಿ, ನವೀಕರಿಸಬಹುದಾದ ಇಂಧನ, ಸಾಮಾಜಿಕ ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿಗೆ ಶೇ. 14.5 ಎಂದು ಅಂದಾಜಿಸಲಾಗಿದೆ ಎಂದರು. ರೈತರ ಆದಾಯ ಸುಧಾರಿಸಲು ಕೃಷಿ ಯಾಂತ್ರೀಕರಣ, ಆಹಾರ ಸಂಸ್ಕರಣೆ, ಕೊಯ್ಲು ನಂತರದ ನಿರ್ವಹಣೆ ಮತ್ತು ನೀರು ಕೊಯ್ಲು ರಚನೆಗಳು ಸೇರಿ ಕೃಷಿ ಕ್ಷೇತ್ರದ ಅಡಿಯಲ್ಲಿ ದೀರ್ಘಾವಧಿಯ ಹೂಡಿಕೆಗೆ ಒತ್ತು ನೀಡಲಾಗಿದೆ ಎಂದರು.
ಬ್ಯಾಂಕ್ ಆಫ್ ಬರೋಡಾದ ಉಪ ಪ್ರಾದೇಶಿಕ ವ್ಯವಸ್ಥಾಪಕ ಅಮರೀಶ್ ಗೌಡ, ಆರ್‌ಬಿಐನ ಎಜಿಎಂ ಅರುಣ ಕುಮಾರ್, ಧಾರವಾಡದ ಎಲ್‌ಡಿಎಂ ಬಸವರಾಜ ಗಡದವರ ಇದ್ದರು.