ESIC ಹುಬ್ಬಳ್ಳಿಯ ನವನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಇಎಸ್ಐಸಿ 75ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟನೆ ಸಮಾರಂಭದಲ್ಲಿ ಜೆಡಿ ಕೆ. ರಘುರಾಮನ್, ಸಹಾಯಕ ನಿರ್ದೇಶಕ ಎಸ್.ಕೆ. ಭರನ್ವಾಲ್, ಎಸ್.ಜಿ. ಪಾಟೀಲ ಇತರರು ಇದ್ದರು.
- ಜೆಡಿ ಕೆ. ರಘುರಾಮನ್ ಅಭಿಮತ
- 75ನೇ ಸಂಸ್ಥಾಪನಾ ದಿನಾಚರಣೆ
ಹುಬ್ಬಳ್ಳಿ: ESIC ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್ಐಸಿ) ದೇಶದ ಮೊದಲ ಸಾಮಾಜಿಕ ಭದ್ರತಾ ಸಂಸ್ಥೆಯಾಗಿದ್ದು, 1952ರಿಂದ ಹಂತಹಂತವಾಗಿ ಬೆಳೆಯುತ್ತ ಬಂದಿದೆ. ಮೊದಲೆಲ್ಲ ಸಂಘಟಿತ ವಲಯಕ್ಕೆ ಸೀಮಿತವಾಗಿದ್ದ ಯೋಜನೆಯು ಈಗ ಎಲ್ಲ ರಂಗಗಳಿಗೂ ವಿಸ್ತರಣೆಯಾಗಿದೆ ಎಂದು ನಿಗಮದ ಜಂಟಿ ನಿರ್ದೇಶಕ ಕೆ. ರಘುರಾಮನ್ ಹೇಳಿದರು.
ಇಲ್ಲಿಯ ನವನಗರದಲ್ಲಿರುವ ನಿಗಮದ ಉಪ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ನಿಗಮದ 75ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕೈಗಾರಿಕೆ, ಉತ್ಪಾದನಾ ವಲಯ, ಸಣ್ಣ ಕಂಪನಿಗಳು, ಗೃಹ ಉದ್ಯೋಗ ಸೇರಿ ಎಲ್ಲ ಕ್ಷೇತ್ರದ ಉದ್ಯೋಗಿಗಳನ್ನು ಇದೀಗ ಇಎಸ್ಐಸಿ ಯೋಜನೆ ಅಡಿ ತರಲಾಗಿದೆ. ಇದರಿಂದ ಕೆಲಸಕ್ಕೆ ಸೇರಿದ ಮೊದಲ ದಿನದಿಂದ ನಿಗಮದ ಸೌಲಭ್ಯಗಳು ಅವರಿಗೆ ಸಿಗಲಿವೆ ಎಂದು ಹೇಳಿದರು.
ಅನೇಕ ಸವಾಲುಗಳನ್ನು ಎದುರಿಸಿಯೂ ನಿಗಮ ಉತ್ತಮ ಸೇವೆ ನೀಡುತ್ತಿದೆ. ದೇಶದ ಸುಮಾರು 20 ಕೋಟಿ ಜನರಿಗೆ ಇದರ ಪ್ರಯೋಜನ ಲಭಿಸುತ್ತಿದೆ ಎಂದರು.
ಸಹಾಯಕ ನಿರ್ದೇಶಕ ಎಸ್.ಕೆ. ಭರನ್ವಾಲ್ ಮಾತನಾಡಿ, ಉದ್ಯೋಗದಾತರು ಕಡ್ಡಾಯವಾಗಿ ಹೊಸ ಕಾರ್ಮಿಕರನ್ನು ಈ ಯೋಜನೆಗೆ ಸೇರಿಸಬೇಕು. ಸರಿಯಾಗಿ ಉದ್ಯೋಗಿಗಳ ಇಎಸ್ ಐ ಕಂತು ಪಾವತಿಸಬೇಕು. ಇದರಿಂದ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ನೌಕರರ ಅತಿದೊಡ್ಡ ಸಾಮಾಜಿಕ ಸುರಕ್ಷಾ ಸಂಸ್ಥೆ ಇದಾಗಿದ್ದು, ಉದ್ಯೋಗದಾತರು ನೌಕರರನ್ನು ಕುಟುಂಬದ ಸದಸ್ಯರಂತೆ ಕಾಣಬೇಕು ಎಂದರು.
ಸರಿಯಾದ ಸಮಯಕ್ಕೆ ಕಂತು ಪಾವತಿಸಿದರೆ ಉದ್ಯೋಗದಾತರು ಹಾಗೂ ಉದ್ಯೋಗಿಗಳಿಗೂ ಲಾಭ. ವಿಳಂಬ ಮಾಡಿದರೆ ಅದರಿಂದ ನಷ್ಟ ಅಷ್ಟೇ ಅಲ್ಲ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಹಾಯಕ ಯಲ್ಲನಗೌಡ ಪಾಟೀಲ ಮಾತನಾಡಿ, ನಿಗಮದಿಂದ ನೌಕರರಿಗೆ ಇರುವ ಸವಲತ್ತುಗಳು, ಅವುಗಳನ್ನು ಹೇಗೆ ಪಡೆಯಬಹುದು ಎಂಬುದರ ಪ್ರಾತ್ಯಕ್ಷಿಕೆ ನೀಡಿದರು.
ಹುಬ್ಬಳ್ಳಿ ಉಪ ಪ್ರಾದೇಶಿಕ ಕಚೇರಿ 1998ರಲ್ಲಿ ಸ್ಥಾಪನೆಯಾಗಿದೆ. 9 ಜಿಲ್ಲೆಗಳನ್ನು ಒಳಗೊಂಡು 13 ಶಾಖಾ ಕಚೇರಿಗಳನ್ನು ಹೊಂದಿದೆ. 27 ಆಸ್ಪತ್ರೆಗಳು ಸೇವೆ ನೀಡುತ್ತಿವೆ ಎಂದರು.
ಇಎಸ್ಐ ಕಾರ್ಡ್ನಲ್ಲಿರುವ ಮಾಹಿತಿಯನ್ನು ನೌಕರರು ಸಮರ್ಪಕವಾಗಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ಇಲಾಖೆಯ ಆ್ಯಪ್, ಆನ್ಲೈನ್ ಸೇವೆ ಬಳಸಬಹುದು ಎಂದರು.
ಅಧಿಕಾರಿಗಳಾದ ಶೈಲೇಶ ಚವ್ಹಾಣ, ರಘು ವಿವಿಧ ಸೌಲಭ್ಯಗಳ ಮಾಹಿತಿ ನೀಡಿದರು.
ವಿಆರ್ಎಲ್ ಲಾಜಿಸ್ಟಿಕ್ಸ್ ಎಚ್ಆರ್ ವಿಪಿ ಎಸ್.ಜಿ. ಪಾಟೀಲ ಮಾತನಾಡಿ, ಕ್ಲೇಮ್ ಪ್ರಕರಣಗಳನ್ನು ಇತ್ಯರ್ಥ ಪಡಿಸುವಾಗ ಅನಗತ್ಯ ದಾಖಲೆಗಳನ್ನು ಕೇಳಬಾರದು. ವಿಧಾನಗಳನ್ನು ಸರಳೀಕರಣಗೊಳಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಿ ನೌಕರರ ಅಹವಾಲು ಆಲಿಸಬೇಕು ಎಂದು ಸಲಹೆ ನೀಡಿದರು.
ಹಲವು ಕಂಪನಿಗಳ ಅಧಿಕಾರಿಗಳು ಅನಿಸಿಕೆ ವ್ಯಕ್ತಪಡಿಸಿದರು. ಸಾಮಾಜಿಕ ಸುರಕ್ಷಾ ಅಧಿಕಾರಿ ಶ್ವೇತಾ ಶಿರಹಟ್ಟಿ ಕಾರ್ಯಕ್ರಮ ನಿರೂಪಿಸಿದರು.