- ಶಾಲೆ ಪ್ರಥಮ ಮಾನ್ಯತೆ-ನವೀಕರಣ ಪ್ರಕರಣ
- ಅಧಿಕೃತ ತಂತ್ರಾಂಶಗಳಿಂದಲೇ ಅನುಮೋದನೆ
- ಅಧಿಕಾರಿ-ಸಿಬ್ಬಂದಿ ಖಾತೆಗಳಿಂದಲೇ ಕೃತ್ಯ
- ಡಿಡಿಪಿಐ ದೂರು ಸುಳ್ಳು-ಆಧಾರ ರಹಿತ
ವಿಜಯಪುರ: ರಾಜ್ಯಾದ್ಯಂತ ಸದ್ದು ಮಾಡಿದ್ದ ಶಾಲೆಗಳ ಮಾನ್ಯತೆ ನವೀಕರಣ ಹಾಗೂ ಪ್ರಥಮ ಮಾನ್ಯತೆಯ ಪ್ರಕರಣ ಅಚ್ಚರಿಯ ತಿರುವು ಪಡೆದಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ, ಪ್ರಥಮ ಮಾನ್ಯತೆ ನೀಡುವ ಪ್ರಕ್ರಿಯೆಯಲ್ಲಿ ತಂತ್ರಾಂಶ ಹೈಜಾಕ್ ಮಾಡಲಾಗಿದೆ ಎಂದು ದೂರು ನೀಡಿದ್ದ ಡಿಡಿಪಿಐ ಮತ್ತು ಸಾಕ್ಷಿಯಾಗಿದ್ದ ಸಿಬ್ಬಂದಿಗೆ ಇದೀಗ ಪೊಲೀಸ್ ತನಿಖೆ ತಿರುಗುಬಾಣವಾಗಿ ಪರಿಣಮಿಸಿದೆ.
ಇಡೀ ಪ್ರಕರಣದಲ್ಲಿ ಇಲಾಖೆಯದ್ದೇ ಪಾತ್ರವಿರುವುದು ತನಿಖೆಯಿಂದ ಬಯಲಾಗಿದ್ದು, ಅಧಿಕೃತ ತಂತ್ರಾಂಶ, ಕ್ರಮಬದ್ಧವಾದ ಲಾಗಿನ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯದ್ದೇ ಮೊಬೈಲ್ ಬಳಕೆ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ‘ಅನಾಮಧೇಯ ವ್ಯಕ್ತಿಗಳಿಂದ ಲಾಗಿನ್ ದುರುಪಯೋಗ ಹಾಗೂ ಅನಧಿಕೃತವಾಗಿ ಅನುಮೋದನೆ ನಡೆದಿದೆ ಎಂಬ ಆರೋಪ ಸುಳ್ಳು ಮತ್ತು ಆಧಾರ ರಹಿತ’ ಎಂದು ಪೊಲೀಸರು ಜೂ.17 ರಂದು ಕೋರ್ಟ್‌ಗೆ ‘ಬಿ-ಸುಳ್ಳು’ ಎಂದು ಅಂತಿಮ ವರದಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
‘ಡಿಪಾರ್ಟ್‌ಮೆಂಟ್ ಆಫ್ ಸ್ಕೂಲ್ ಎಜುಕೇಶನ್-ಕರ್ನಾಟಕ ವೆಬ್‌ಸೈಟ್’ನಲ್ಲಿರುವ ತಂತ್ರಾಂಶದಡಿ ಡಿಡಿಪಿಐ ಲಾಗಿನ್ ವಿವರ ಹಾಗೂ ಪಾಸ್ವರ್ಡ್ ಪಡೆದು ಒಟ್ಟು 58 ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣಗೊಳಿಸಲಾಗಿದೆ. ಇದೊಂದು ಸರ್ಕಾರದ ಆನ್‌ಲೈನ್ ವ್ಯವಸ್ಥೆಯ ನೈತಿಕತೆ ಹಾಗೂ ಭದ್ರತೆಯ ಹಾನಿಯಾಗಿದೆ. ಹೀಗಾಗಿ ಸರ್ವರ್ ಲಾಗ್‌ಗಳು, ಐಪಿ ವಿಳಾಸ, ಡಿಜಿಟಲ್ ಆಡಿಟ್ ಟ್ರೇಲ್‌ಗಳ ಪರಿಶೀಲನೆ ಸೇರಿದಂತೆ ಸಮಗ್ರ ತನಿಖೆ ನಡೆಸುವಂತೆ ಡಿಡಿಪಿಐ ಫೆ. 25ರಂದು ಸೈಬರ್ ಠಾಣೆಗೆ ದೂರು ನೀಡಿದ್ದರು.
ಫೆ. 26ರಂದು ತನಿಖೆ ಮುಂದುವರಿಸಿದ ಪೊಲೀಸ್ ತಂಡ ‘ಡಿಡಿಪಿಐ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ರಾಚಯ್ಯ ಗಣಾಚಾರಿ, ಸಿಬ್ಬಂದಿ ಮಲ್ಲಿಕಾರ್ಜುನ ಸೋನ್ಯಾಳ ಹಾಗೂ ರಾಜೇಂದ್ರ ಅಗರಖೇಡ ಇವರು ಆಡಳಿತಾತ್ಮಕ ಪಾತ್ರ ಹೊಂದಿರುವ ಕಾರಣಕ್ಕೆ ಅವರ ಹೇಳಿಕೆ ಸಹಾಯಕವೆಂದು ಪರಿಗಣಿಸಿ’ ಆ ಮೂಲಕ ತನಿಖೆ ಚುರುಕುಗೊಳಿಸಿತು.
ತನಿಖೆಯಲ್ಲಿ ಕಂಡು ಬಂದಿದ್ದೇನು?
ಡಿಡಿಪಿಐ ವೀರಯ್ಯ ಸಾಲಿಮಠ ಸೇರಿ 36 ಜನರ ವಿಚಾರಣೆ ನಡೆಸಿದ ತನಿಖಾ ತಂಡ ಡಿಡಿಪಿಐ ಕಚೇರಿಯಿಂದ ಹಿಡಿದು ಬೆಂಗಳೂರಿನ ಮುಖ್ಯಕಾರ್ಯದರ್ಶಿಗಳ ಕಚೇರಿ, ಎನ್‌ಐಸಿ, ಈ-ಆಡಳಿತ ಕಚೇರಿ ಸೇರಿ ಅನೇಕ ಕಡೆ ಮಾಹಿತಿ ಕಲೆ ಹಾಕಿ ಸಮಗ್ರ ತನಿಖೆ ನಡೆಸಲಾಗಿ ಶಾಲೆಗಳ ಮಾನ್ಯತೆ ಮತ್ತು ನವೀಕರಣ ಪ್ರಕ್ರಿಯೆ ಡಿಡಿಪಿಐ ಇಲಾಖೆಯ ಅಧಿಕೃತ ತಂತ್ರಾಂಶಗಳಿಂದಲೇ, ಡಿಡಿಪಿಐ ಗಮನಕ್ಕಿದ್ದೇ ನಡೆದಿರುವುದು ಕಂಡು ಬಂದಿತು.
ಅಲ್ಲದೇ, ಸರ್ವರ್ ಲಾಗ್ಸ್, ಐಪಿ ವಿಳಾಸ, ಡಿಜಿಟಲ್ ಆಡಿಟ್ ಟ್ರಯಲ್, ಲಾಗಿನ್ ಹಿಸ್ಟರಿ, ಒಟಿಪಿಗಳ ಪರಿಶೀಲನೆ...ಹೀಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗಿ ಡಿಡಿಪಿಐ ಕಚೇರಿಗೆ ಹಂಚಿಕೆ ಮಾಡಲಾದ ಸರ್ಕಾರಿ ಮೊಬೈಲ್ ಸಂಖ್ಯೆ ಹಾಗೂ ಇಲಾಖೆಯ ಅಧಿಕೃತ ನೆಟ್‌ವರ್ಕ್ ಮೂಲ ಸೌಕರ್ಯದ ಬಳಕೆಯಲ್ಲಿಯೇ ಸಂಬಂಧಿತ ಸೆಶನ್ ಅವಧಿಯಲ್ಲಿಯೇ ನಡೆದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ಹೀಗಾಗಿ ಡಿಡಿಪಿಐ ವೀರಯ್ಯ ಸಾಲಿಮಠ ನೀಡಿರುವ ದೂರು ವಾಸ್ತವಾಂಶ ಹಾಗೂ ತಾಂತ್ರಿಕ ದಾಖಲೆಗಳಿಗೆ ವಿರುದ್ಧವಾಗಿರುವುದು ಕಂಡು ಬಂದಿದೆ. ಆದ್ದರಿಂದ ಈ ಫಿರ್ಯಾದಿ ‘ಸುಳ್ಳು ಮತ್ತು ಆಧಾರ ರಹಿತ’ ಎಂದು ತನಿಖಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋರ್ಟ್‌ನಿಂದ ಡಿಡಿಪಿಐಗೂ ನೋಟಿಸ್ ನೀಡಲಾಗಿದ್ದು, ವರದಿಯನ್ನು ವಿರೋಧಿಸುವುದಿದ್ದರೆ ನೋಟಿಸ್ ತಲುಪಿದ ವಾರದೊಳಗೆ ಮ್ಯಾಜಿಸ್ಟ್ರೇಟ್ ಎದುರು ವಿರೋಧಿಸಬಹುದಾಗಿ ಎಂದು ತಿಳಿಸಲಾಗಿದೆ. ಡಿಡಿಪಿಐ ಕೂಡ ನೋಟಿಸ್ ಸ್ವೀಕರಿಸಿದ್ದು, ಚಾಲೆಂಜ್ ಮಾಡುತ್ತಾರಾ ಅಥವಾ ತನಿಖೆಯ ವರದಿಯನ್ನು ಒಪ್ಪಿಕೊಳ್ಳುತ್ತಾರಾ? ಎಂಬ ಕುತೂಹಲ ಮನೆ ಮಾಡಿದೆ.
ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ‘ಬಿ-ಸುಳ್ಳು’ ಎಂದು ಅಂತಿಮ ವರದಿ ಸಲ್ಲಿಸಲಾಗಿದೆ. ದೂರುದಾರರು ತಿಳಿಸಿದಂತೆ ಎಲ್ಲಿಯೂ ಇಲಾಖೆಯ ತಂತ್ರಾಂಶ ದುರ್ಬಳಕೆ ಆಗಿಲ್ಲ, ಯಾರೂ ಹ್ಯಾಕ್ ಮಾಡಿಲ್ಲ ಮತ್ತು ಅವರ ಗಮನಕ್ಕಿದ್ದೇ ಎಲ್ಲವೂ ನಡೆದಿರುವುದು ತನಿಖೆಯಿಂದ ತಿಳಿದು ಬಂದಿದೆ.
— ಲಕ್ಷ್ಮಣ ನಿಂಬರಗಿ, ಎಸ್‌ಪಿ