D.V.Halabhavi national awardees 
ಧಾರವಾಡ

ಚಿತ್ರಕಲಾಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರಕಟ

ಧಾರವಾಡ: ಚಿತ್ರಕಲಾಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ನ. 28ರಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಕಲಾವಿದರಿಂದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. 29ರಂದು ಸಂಜೆ 5 ಗಂಟೆಗೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ 2025ನೇ ಸಾಲಿನ ಚಿತ್ರಕಲಾಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬೆಂಗಳೂರಿನ ಹಿರಿಯ ಚಿತ್ರ ಕಲಾವಿದ ಬಿ.ಜಿ. ಗುಜ್ಜಾರಪ್ಪ ಅವರಿಗೆ ಜೀವಮಾನ ಸಾಧನೆಯ `ಕುಂಚ ಕಲಾತಪಸ್ವಿ' ರಾಷ್ಟ್ರೀಯ ಪ್ರಶಸ್ತಿ, ಕಲಬುರ್ಗಿಯ ಚಿತ್ರಕಲಾವಿದ ಚಂದ್ರಹಾಸ ಜಾಲಿಹಾಳ ಅವರಿಗೆ `ಕುಂಚ ಕಲಾಶ್ರೀ' ರಾಷ್ಟ್ರೀಯ ಪ್ರಶಸ್ತಿ, ಮುಂಬೈನ ದೀಪಾಲಿ ಸಂದೇಶ್ ಖುಲೆ ಎಸ್. ಹಾಗೂ ಉತ್ತರ ಕನ್ನಡ ಜಿಲ್ಲೆಯ ನಾಮದೇವ ಪಟ್ಟೇಕರ ಅವರಿಗೆ `ಯುವ ಕುಂಚ ಕಲಾಶ್ರೀ' ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು.
ಡಾ.ಲೋಹಿತ್ ನಾಯ್ಕರ್ ಪ್ರಶಸ್ತಿ ಪ್ರದಾನ ಮಾಡುವರು. ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿದ್ಯಾವರ್ಧಕ ಸಂಘ ಅಧ್ಯಕ್ಷ ಚಂದ್ರಕಾ೦ತ ಬೆಲ್ಲದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಅತಿಥಿಗಳಾಗಿ ಪಾಲ್ಗೊಳ್ಳುವರು. ಡಾ. ಜಗದೀಶ ಕೊಪ್ಪ ಅಭಿನಂದನಾ ಪರ ಮಾತನಾಡುವರು. ಶುಭಾಂಗಿ ಜಾಧವ ಅವರ ಗಾಯನ ಪ್ರಸ್ತುತಪಡಿಸುವರು. ಹಿರಿಯ ಕಲಾವಿದ ಸುರೇಶ ಹಾಲಭಾವಿ ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.