ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ (Drought NK) ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಹೇಮನಗೌಡ ಬಸನಗೌಡ್ರ, ಪ್ರಕಾಶ ಸವದತ್ತಿ, ಹನಮಂತಪ್ಪ ಕರಲಿಂಗಣ್ಣವರ, ಮೌನೇಶ ಲಾಳಿ, ಶಂಕರಗೌಡ ನಿಜಲಿಂಗನಗೌಡ್ರ, ಲಿಂಗಯ್ಯ ಹಿರೇಮಠ, ಇತರರು ಇದ್ದರು.
ಹುಬ್ಬಳ್ಳಿ: ಮಳೆಯ ಕೊರತೆಯಿಂದ ರೈತರು (Drought NK) ಸಂಕಷ್ಟಕ್ಕೆ ಸಿಲುಕಿದ್ದು, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಬರ ಪೀಡಿತವೆಂದು ರಾಜ್ಯ ಸರ್ಕಾರ ಘೊಷಿಸಬೇಕು. ತಪ್ಪಿದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ರತ್ನ ಭಾರತ ರೈತ ಸಮಾಜದ ನೇತೃತವ್ದಲ್ಲಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿದ ಸುಮಾರು 80 ರೈತರು, ನಮ್ಮ ಬೇಡಿಕೆಗಳಿಗೆ ಸರ್ಕಾರ ಜುಲೈ 31ರೊಳಗೆ ಸ್ಪಂದಿಸಬೇಕು ಎಂದು ಗಡುವು ನೀಡಿದರು.
ಕೆಲ ಕಾಲ ವಾಹನ ಸಂಚಾರ ತಡೆ ನಡೆಸಿದರು. ಬಾರುಕೋಲು ಪ್ರದರ್ಶಿಸಿ ಅಕ್ರೋಶ ವ್ಯಕ್ತಪಡಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ರೈತರ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. 200 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಬೆಣ್ಣಿಹಳ್ಳ ತಡೆಗೋಡೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆಯ ನೀರು ಹಳ್ಳದಲ್ಲಿ ಹರಿಯದೇ ಜಮೀನಿನಲ್ಲಿ ನಿಂತಿದ್ದು ರೈತರಿಗೆ ಹಾನಿಯಾಗಿದೆ. ಜಮೀನಿನಲ್ಲಿ ನಿಂತ ನೀರು ಹಳ್ಳಕ್ಕೆ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು ಹಾಗೂ ಗುಣಮಟ್ಚದ ಕಾಮಗಾರಿ ಕೈಗೊಂಡು ರೈತರನ್ನು ಬೆಣ್ಣಿಹಳ್ಳ ಪ್ರವಾಹದಿಂದ ರಕ್ಷಿಸಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಸರಬರಾಜು ವ್ಯವಸ್ಥೆ ಖಾಸಗೀಕರಣ ಹಿಂಪಡೆಯಬೇಕು. ಬಿಡದಿ ಟೌನ್ಶಿಪ್ ಯೋಜನೆಯನ್ನು ಕೈ ಬಿಡಬೇಕು. ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಮದ ಗುಡಿದಾರಿಯಲ್ಲಿರುವ ಹಳ್ಳಕ್ಕೆ ಸೇತುವೆ ನಿರ್ವಿುಸಬೇಕು. ಧಾರವಾಡ ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆ ಇದ್ದು, ಕೊಡಲೇ ನಿಯೋಜಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ರವಾನಿಸಿದರು.
ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ, ಪ್ರಕಾಶ ಸವದತ್ತಿ, ಹನಮಂತಪ್ಪ ಕರಲಿಂಗಣ್ಣವರ, ಮೌನೇಶ ಲಾಳಿ, ಶಂಕರಗೌಡ ನಿಜಲಿಂಗನಗೌಡ್ರ, ಲಿಂಗಯ್ಯ ಹಿರೇಮಠ, ಇತರರು ಇದ್ದರು.