ಧಾರವಾಡ- ಅಳ್ನಾವರ ರಸ್ತೆಯ ಮುಗದ ಬಳಿ ಪಲ್ಟಿಯಾದ ಲಾರಿ.
ಧಾರವಾಡ: ಮ್ಯಾಂಗನೀಸ್ ತುಂಬಿದ್ದ ಲಾರಿ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕ ಮೃತಪಟ್ಟ ಘಟನೆ ಧಾರವಾಡ- ಅಳ್ನಾವರ ರಸ್ತೆಯ ಮುಗದ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಮುಗದ ಹತ್ತಿರದ ರಸ್ತೆ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಹೊಸಪೇಟೆಯಿಂದ ಗೋವಾಕ್ಕೆ ಹೊರಟಿದ್ದ ಲಾರಿ ಪಲ್ಟಿಯಾಗಿದ್ದು, ಅದರಲ್ಲಿದ್ದ ಮ್ಯಾಂಗನೀಸ್ ರಸ್ತೆಯುದ್ದಕ್ಕೂ ಬಿದ್ದಿದೆ. ಗೋವಾದಿಂದ ಧಾರವಾಡ ಕಡೆ ಹೊರಟಿದ್ದ ಕ್ಯಾಂಟರ್ ಚಾಲಕ ಮೃತಪಟ್ಟಿದ್ದು, ವಿವರ ತಿಳಿದುಬಂದಿಲ್ಲ.
ಇದೇ ರಸ್ತೆಯಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳ ಮೇಲೆ ಲಾರಿಯಲ್ಲಿದ್ದ ಮ್ಯಾಂಗನೀಸ್ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ವರನ್ನು ದಾರಿಹೋಕರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಬೃಹತ್ ಲಾರಿ ಉರುಳಿಬಿದ್ದಿದ್ದರಿಂದ ಅಳ್ನಾವರ ಮುಖ್ಯ ರಸ್ತೆ ಕೆಲ ಗಂಟೆ ಬಂದ್ ಆಗಿತ್ತು.