ಕಾವ್ಯ ಮತ್ತು ಕಥೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಕುಂ. ವೀರಭದ್ರಪ್ಪ ಮಾತನಾಡಿದರು. 
ಧಾರವಾಡ

ಡಾ. ಕಣವಿ ಕನ್ನಡ ಕಾವ್ಯಲೋಕದ ಮುಕಟಮಣಿ

ಧಾರವಾಡ: ನಾಡೋಜ ಡಾ. ಚನ್ನವೀರ ಕಣವಿ ಕನ್ನಡ ಕಾವ್ಯಲೋಕದ ಮುಕಟಮಣಿಯಾಗಿ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಿದರು. ಧಾರವಾಡದ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದವರಲ್ಲಿ ಅವರು ಒಬ್ಬರು ಎಂದು ಹಿರಿಯ ಸಾಹಿತಿ ನಾಡೋಜ ಡಾ. ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ನಾಡೋಜ ಡಾ. ಚನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಕನ್ನಡ ಯುವ ಲೇಖಕರಿಗಾಗಿ ಆಯೋಜಿಸಿದ್ದ ಕಾವ್ಯ ಮತ್ತು ಕಥೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾನುವಾರ `ಕಣವಿ ದಂಪತಿಗಳು' ವಿಷಯ ಕುರಿತು ಮಾತನಾಡಿದರು. ಡಾ. ಚನ್ನವೀರ ಕಣವಿಯವರದು ಶಿಸ್ತುಬದ್ಧ ಜೀವನ, ಮಂದ ಹಾಸವೆ ಅವರ ಜೀವನದ ವಿಶೇಷತೆ ಎಂದರು.
1950 ದಶಕದಲ್ಲಿ ಸಾಹಿತಿಗಳು, ಕವಿಗಳು ಪಟ್ಟ ಪಾಡುಗಳು ಅನೇಕ. ಆದರೆ ಈಗಿನ ತಲೆಮಾರಿನ ಯುವ ಲೇಖಕರಿಗೆ ಅಂತಹ ಕಷ್ಟಗಳಿಲ್ಲ. ಯುವ ಲೇಖಕರಿಗೆ ಪ್ರತಿಭೆಯೆ `ಗಾಡ್ ಫಾದರ್' ಆಗಬೇಕು. ಲೇಖಕರು ಕಷ್ಟಪಟ್ಟಷ್ಟು ಅವರಿಂದ ಉತ್ಕೃಷ್ಟ ಸಾಹಿತ್ಯ ರಚನೆ ಸಾಧ್ಯ. ಕಣವಿಯವರು ಬರೆದ ಸಾವಿರಾರು ಕಾವ್ಯಗಳಲ್ಲಿ ಉತ್ಕೃಷ್ಟತೆ ಇದೆ. ಬಹುಮಾನ ಬಾರದ ಕಾವ್ಯ ಹಾಗೂ ಕಥೆಗಳು ಅಲಕ್ಷಿಸದೆ ಅವೂ ಸಹ ಓದುವಂತಾಗಬೇಕು ಎಂದು ಹೇಳಿದರು.
ಸಾಹಿತಿ ಡಾ. ಜಿ.ಎಂ. ಹೆಗಡೆ ಮಾತನಾಡಿ, ಡಾ. ಚನ್ನವೀರ ಕಣವಿ ಹಾಗೂ ಜಿ.ಎಸ್. ಶಿವರುದ್ರಪ್ಪ ಸಮಕಾಲಿನರಾಗಿದ್ದರೂ ಅವರಿಬ್ಬರ ಕಾವ್ಯ ರಚನಾ ಶೈಲಿ ವಿಭಿನ್ನವಾಗಿತ್ತು. ಇಬ್ಬರೂ ತಾವು ಬರೆದ ಕಾವ್ಯ ಕುರಿತು ಚರ್ಚಿಸುತ್ತಿದ್ದುದು ವಿಶೇಷ ಎಂದರು.
ಸ್ಪರ್ಧೆಗೆ ಬಂದ ಕಾವ್ಯ ಕುರಿತು ಡಾ. ಎಂ.ಡಿ. ಒಕ್ಕುಂದ ಹಾಗೂ ಕಥಾ ಸ್ಪರ್ಧೆಗೆ ಬಂದ ಕಥೆಗಳ ಕುರಿತು ಶ್ರೀಧರ ಗಸ್ತಿ ಮಾತನಾಡಿದರು.
ಬಹುಮಾನ ವಿತರಣೆ:
ನಾಡೋಜ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಣಿಕಂಠ ಗೊದಮನಿ ಮತ್ತು ರೈಹಾನಾ ಕೊಯ್ಲತ್ತಡ್ಕಮನೆ,ದ್ವಿತೀಯ ಸ್ಥಾನ ಪಡೆದ ಯಶಸ್ವಿನಿ ಎಂ.ಎನ್. ಹಾಗೂ ತೃತೀಯ ಸ್ಥಾನ ಪಡೆದ ಸುರೇಶ ಹಳ್ಳಿ ಅವರಿಗೆ ಬಹುಮಾನ ವಿತರಿಸಲಾಯಿತು.
ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾಶ್ರೀ ಹಡಪದ, ಶರೀಫಾ ಬೇಗಂ, ದ್ವಿತೀಯ ಸ್ಥಾನ ಪಡೆದ ಶಿವಕುಮಾರ ಚನ್ನಪ್ಪನವರ, ತೃತೀಯ ಸ್ಥಾನ ಪಡೆದ ಪೃಥ್ವಿರಾಜ್ ಟಿ.ಬಿ. ಅವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಅಧ್ಯಕ್ಷರಾದ ಚಂದ್ರಕಾAತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿವಾನಂದ ಕಣವಿ, ಡಾ. ಸುಮಿತ್ರಾ ಕಾಡದೇವರಮಠ ವೇದಿಕೆಯಲ್ಲಿದ್ದರು.