ಅಭಿನಂದನಾ ಸಮಿತಿ ಅಧ್ಯಕ್ಷ ಅರಿಹಂತ ಪ್ರಸಾದ ಸುದ್ದಿಗೋಷ್ಠಿ
ಧಾರವಾಡ: ಜನತಾ ಶಿಕ್ಷಣ ಸಮಿತಿ (ಜೆಎಸ್‌ಎಸ್) ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಏ. 5ರಂದು ಬೆಳಗ್ಗೆ 9.30ಕ್ಕೆ ಸನ್ನಿಧಿ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಅಜಿತ ಪ್ರಸಾದ ಅವರ ಅಭಿನಂದನಾ ಸಮಿತಿ ಅಧ್ಯಕ್ಷ ಅರಿಹಂತ ಪ್ರಸಾದ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಅತ್ಯತ್ತಮ ಕೊಡುಗೆ ನೀಡಿದ ಡಾ. ಅಜಿತ ಪ್ರಸಾದ ಅವರು, ಸ್ನೇಹಜೀವಿ, ಉತ್ತಮ ಆಡಳಿತಾಽಕಾರಿ, ಅತ್ಯುತ್ತಮ ಸಂಘಟನಾಕಾರ. ಸಂಸ್ಥೆ, ವಿದ್ಯಾರ್ಥಿ ಸಮುದಾಯ, ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ದುಡಿದಿದ್ದಾರೆ. ಇವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಥಣಿಯ ಮೋಠಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಶುಭಾಶೀರ್ವಚನ ನೀಡುವರು. ಕಾನೂನು ಮತ್ತು ಸಂಸದೀಯ ವ್ಯವಹಾರದ ಸಚಿವ ಎಚ್.ಕೆ. ಪಾಟೀಲ್ ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು `ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು ಎಂದರು.
ಅತಿಥಿಗಳಾಗಿ ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎನ್.ಎಚ್ ಕೊನರೆಡ್ಡಿ, ಎಂಎಲ್‌ಸಿ ಎಸ್.ವಿ. ಸಂಕನೂರ, ಮೇಯರ್ ಜ್ಯೋತಿ ಪಾಟೀಲ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಎಸ್‌ಡಿಎಂ ಸೊಸೈಟಿ ಕಾರ್ಯದರ್ಶಿ ಜೀವಂಧರ ಕುಮಾರ ಆಗಮಿಸುವರು ಎಂದರು.
ಧಾರವಾಡ ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ ಎಂದು ಹೆಸರುವಾಸಿಯಾಗಲು ಜನತಾ ಶಿಕ್ಷಣ ಸಮಿತಿಯ ಪಾತ್ರ ಬಹುದೊಡ್ಡದಿದೆ. ಹುಕ್ಕೇರಿಕರ ರಾಮರಾಯರು, ವಿಶ್ವೇಶತೀರ್ಥ ಸ್ವಾಮೀಜಿ, ಡಾ. ಡಿ. ವೀರೇಂದ್ರ ಹೆಗ್ಗಡೆ, ಡಾ. ನ. ವಜ್ರಕುಮಾರ ಅವರು ಸಂಸ್ಥೆಯ ಏಳಗಿಗೆ ಕಾರಣರಾಗಿದ್ದಾರೆ. ಇವರೆಲ್ಲರ ಮನದಾಸೆಯಂತೆ ಜನತಾ ಶಿಕ್ಷಣ ಸಮಿತಿಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಬೆಳೆಸಿದ ಕೀರ್ತಿ ಡಾ. ಅಜಿತ ಪ್ರಸಾದ ಅವರಿಗೆ ಸಲ್ಲುತ್ತದೆ ಎಂದರು.
ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾವೀರ ಉಪಾಧ್ಯೆ ಮಾತನಾಡಿ, ಡಾ. ಅಜಿತ ಪ್ರಸಾದ 1973ರಲ್ಲಿ ಜೆಎಸ್‌ಎಸ್ ಪದವಿ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆಗೆ ಸೇರಿದರು. 2000ರಲ್ಲಿ ಹಣಕಾಸು ಅಽಕಾರಿಯಾಗಿ ಅಽಕಾರ ಸ್ವೀಕರಿಸಿದರು. ಉಪಪ್ರಾಚಾರ್ಯರಾಗಿ, ಇಗ್ನೋ ಕೋ-ಆರ್ಡಿನೇಟರ್ ಆಗಿ 2005ರಲ್ಲಿ ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಎಸ್.ಕೆ ಗುಬ್ಬಿ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. 2012ರಲ್ಲಿ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಗೆ ಪ್ರಾಚಾರ್ಯರಾಗಿ, 2022ರಿಂದ ಜೆಎಸ್‌ಎಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಾರ್ಯ ತತ್ಪರತೆಯಿಂದ ಬೆರಳೆಣಿಕೆಯಷ್ಟಿದ್ದ ಜೆಎಸ್‌ಎಸ್ ಅಂಗ ಸಂಸ್ಥೆಗಳು 25 ಅಂಗ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ. 13 ವರ್ಷಗಳಿಂದ ಕವಿವಿ ಅಥ್ಲೇಟಿಕ್ ಮೀಟ್‌ನಲ್ಲಿ ಜೆಎಸ್‌ಎಸ್ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರತಿ ವರ್ಷ ಕ್ರೀಡಾಪಟುಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 40 ಲಕ್ಷ ರೂ. ಶಿಷ್ಯವೇತನ ನೀಡಲಾಗಿದೆ. 2005ರಿಂದ ಇಲ್ಲಿಯವರೆಗೂ 300ಕ್ಕೂ ಹೆಚ್ಚು ಕ್ಯಾಂಪಸ್ ಸಂದರ್ಶನಗಳ ಮೂಲಕ 60,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಿದ್ದಾರೆ ಎಂದರು.
ಡಾ. ಸೂರಜ ಜೈನ್, ಡಾ. ಜಿನೇಂದ್ರ ಕುಂದಗೋಳ, ಸಾಧನಾ ಎಸ್., ಡಾ. ಬಿ.ಎನ್. ಭಾವಿ ಸುದ್ದಿಗೋಷ್ಠಿಯಲ್ಲಿದ್ದರು.