anna suvidha yojana 
ಧಾರವಾಡ

ವಯೋವೃದ್ಧರಿಗಿನ್ನು ಮನೆಬಾಗಿಲಿಗೆ ಪಡಿತರ!

ಪ್ರಮುಖ ಮುಖ್ಯಾಂಶಗಳು

  • 75 ವರ್ಷ ಮೇಲ್ಪಟ್ಟವರಿಗಾಗಿ `ಅನ್ನ ಸುವಿಧಾ ಯೋಜನೆ' ಜಾರಿ
  • ವಯೋವೃದ್ಧರಿಗಿನ್ನು ಮನೆಬಾಗಿಲಿಗೆ ಪಡಿತರ!
  • ಡಿಸೆಂಬರ್ ತಿಂಗಳಿನ ಪಡಿತರ ತಲುಪಿಸಲು ಸಿದ್ಧತೆ
ಧಾರವಾಡ: ವಯೋವೃದ್ಧರು ಏಕ ಸದಸ್ಯ ಪಡಿತರ ಚೀಟಿದಾರರಾಗಿದ್ದರೆ ಅವರಿಗೆ ಮನೆ ಬಾಗಿಲಿಗೆ ಪಡಿತರ ವಿತರಿಸಲು ರಾಜ್ಯ ಸರ್ಕಾರ `ಅನ್ನ ಸುವಿಧಾ ಯೋಜನೆ' ಜಾರಿಗೊಳಿಸಿದೆ.
ಪ್ರಸಕ್ತ ವರ್ಷದ ನವೆಂಬರ್ ತಿಂಗಳಲ್ಲೇ ಯೋಜನೆ ರೂಪಿಸಲಾಗಿದ್ದು, ಈ ಯೋಜನೆಯಡಿ 75 ವರ್ಷ ಮೇಲ್ಪಟ್ಟ ಏಕ ಸದಸ್ಯ ಪಡಿತರ ಚೀಟಿದಾರರ ಮನೆ ಬಾಗಿಲಿಗೆ ಡಿಸೆಂಬರ್ ತಿಂಗಳಿನ ಪಡಿತರ ತಲುಪಿಸಲು ಸಿದ್ಧತೆ ನಡೆದಿದೆ. ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕ್ರಮ ವಹಿಸುವಂತೆ ಆಹಾರ ಇಲಾಖೆ ಅಽಕಾರಿಗಳಿಗೆ ಸರ್ಕಾರ ಸೂಚಿಸಿದೆ. ಈ ಯೋಜನೆಯಡಿ ಸವಲತ್ತು ಪಡೆಯಲು ಧಾರವಾಡ ಜಿಲ್ಲೆಯ ಅರ್ಹ 7,383 ಫಲಾನುಭವಿಗಳನ್ನು ಈವರೆಗೆ ಗುರುತಿಸಲಾಗಿದೆ. ಅನ್ನಸುವಿಧಾ ಯೋಜನೆಯ ಅನುಷ್ಠಾನಕ್ಕಾಗಿ ಆಹಾರ ತಂತ್ರಾಶದಲ್ಲಿ ಅನ್ನ ಸುವಿಧಾ ಮಾಡ್ಯೂಲ್ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ಅಭಿವೃದ್ಧಿ ಪಡಿಸಿದೆ. ಯೂಸರ್ ಅಕ್ಸ್ಪೆನ್ಸ್ ಟೆಸ್ಟಿಂಗ್ (ಯುಎಟಿ) ಪೂರ್ಣಗೊಳಿಸಿದೆ. ಅನ್ನ ಸುವಿಧಾ ಮಾಡ್ಯೂಲ್ ಬಗ್ಗೆ ಈಗಾಗಲೇ ಎಲ್ಲ ಜಿಲ್ಲೆಗಳಲ್ಲೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ 75 ವರ್ಷ ಪೂರೈಸಿದ ಅಂತ್ಯೋದಯ ಅನ್ನಭಾಗ್ಯ (ಎಎವೈ) ಪಡಿತರ ಚೀಟಿದಾರರು 409 ಮಂದಿ ಹಾಗೂ ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಹೊಂದಿರುವ 6,974 ಫಲಾನುಭವಿಗಳಿರುವುದು ದೃಢಪಟ್ಟಿದೆ. ಇವರ ಮನೆ ಬಾಗಿಲಿಗೆ ಮುಂದಿನ ತಿಂಗಳಿಂದಲೇ ಪಡಿತರ ಪದಾರ್ಥಗಳನ್ನು ಪೂರೈಸಲಾಗುತ್ತದೆ.
ವಯಸ್ಸಾದವರಿಗೆ ಬಹಳ ಅನುಕೂಲ:
ಕುಟುಂಬದಲ್ಲಿ ವಯಸ್ಸಾದ ಏಕಸದಸ್ಯರಷ್ಟೇ ಇರುವವರಿಗೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪದಾರ್ಥಗಳನ್ನು ತರುವುದು ಕಷ್ಟವಾಗಿತ್ತು. ತಾವೇ ಆಟೋ ಹಿಡಿದು ಹೋಗಬೇಕಿತ್ತು. ಇಲ್ಲವೇ ಸಹಾಯಕ್ಕಾಗಿ ಅವರಿವರನ್ನು ಬೇಡಬೇಕಿತ್ತು. ಆದರೆ, ಸರ್ಕಾರ ಜಾರಿಗೊಳಿಸಿರುವ ಅನ್ನ ಸುವಿಧಾ ಯೋಜನೆಯಿಂದಾಗಿ ವಯೋವೃದ್ಧರು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವುದು ತಪ್ಪಿದಂತಾಗಿದೆ.
ಮನೆ ಬಾಗಿಲಿಗೆ ಪಡೆಯುವುದು ಹೇಗೆ?
ಪ್ರತಿ ತಿಂಗಳು ಎನ್‌ಐಸಿ ವತಿಯಿಂದ ಅನ್ನ ಸುವಿಧಾ ಲಾನುಭವಿಗಳನ್ನು ಗುರುತಿಸಲಾಗುತ್ತದೆ. ಆಹಾರ ಇಲಾಖೆಯಿಂದ ಇಡಿಸಿಎಸ್ ಮೂಲಕ ಪಡಿತರ ಚೀಟಿದಾರರ ಮೊಬೈಲ್‌ಗೆ ಬರುವ ಸಂದೇಶದಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿ, ನೋಂದಣಿ ಮಾಡಿಸಿಕೊಂಡರೆ ವಾರದೊಳಗೆ ಮನೆ ಬಾಗಿಲಿಗೆ ಪಡಿತರ ಪದಾರ್ಥಗಳು ಬರಲಿವೆ. ಅರ್ಹ ಲಾನುಭವಿಗಳು ಆಯಾ ತಿಂಗಳ ದಿನಾಂಕ 1ರಿಂದ 5ರೊಳಗೆ ಅವರ ನ್ಯಾಯಬೆಲೆ ಅಂಗಡಿಗಳಲ್ಲಿ ಮನೆ ಬಾಗಿಲಿಗೆ ಪಡಿತರ ಪಡೆಯಲು ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಾಯಿತ ಅರ್ಹ ಲಾನುಭವಿಗಳ ಮನೆ ಬಾಗಿಲಿಗೆ ಆಯಾ ತಿಂಗಳ 6ರಿಂದ 15ರೊಳಗೆ ನ್ಯಾಯಬೆಲೆ ಅಂಗಡಿಯಿದ ಪಡಿತರ ಪದಾರ್ಥಗಳನ್ನು ಪೂರೈಸಲಾಗುತ್ತದೆ.
"

ಒಂಟಿಯಾಗಿರುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮನೆಗಳಿಗೆ ಉಚಿತವಾಗಿ ಪಡಿತರ ಪದಾರ್ಥಗಳನ್ನು ಪೂರೈಸಲು ಅನ್ನ ಸುವಿಧಾ ಯೋಜನೆಯಡಿ ಆಹಾರ ಇಲಾಖೆ ಸಿದ್ಧತೆ ನಡೆಸಿದೆ. ಡಿಸೆಂಬರ್ ತಿಂಗಳಿಂದಲೇ ವಿತರಣೆ ಕಾರ್ಯ ನಡೆಯಲಿದೆ. ಪ್ರತಿ ತಿಂಗಳ ಮೊದಲ ಐದು ದಿನಗಳಲ್ಲಿ ನೋಂದಣಿಗೆ ಅವಕಾಶವಿದೆ.