ನಟ ಡಾಲಿ ಧನಂಜಯ ಅವರ ಮಗುವಿಗಾಗಿ ಸಿದ್ಧವಾಗಿರುವ ಕಲಘಟಗಿಯ ಬಣ್ಣದ Cradle ತೊಟ್ಟಿಲು.
ಕಲಘಟಗಿ: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಅವರ ಪುತ್ರನಿಗೆ ಕಲಘಟಗಿಯ ಪ್ರಸಿದ್ಧ ಬಣ್ಣದ ತೊಟ್ಟಿಲು Cradle ಸಿದ್ಧವಾಗುತ್ತಿದೆ.
ರಾಜ್ಯದಲ್ಲಿ ಕಲಘಟಗಿ ಅಂದರೆ ತಕ್ಷಣ ನೆನಪಿಗೆ ಬರುವುದು ಬಣ್ಣದ ಕುಸುರಿ ಕೆತ್ತನೆಯ ತೊಟ್ಟಿಲು. ಒಂದು ಕಾಲದಲ್ಲಿ ಕಲಘಟಗಿಯನ್ನು ರಾಷ್ಟ್ರ ಮಟ್ಟಕ್ಕೆ ಪರಿಚಯ ಮಾಡಿಸಿದ್ದು ಇದೇ ತೊಟ್ಟಿಲು.
ಈಗಿನ ಆಧುನಿಕತೆಯ ಯುಗದಲ್ಲೂ ತನ್ನ ಮಹತ್ವವನ್ನು 200 ವರ್ಷಗಳಿಂದ ಉಳಿಸಿಕೊಂಡು ಬರುವಲ್ಲಿ ಇಲ್ಲಿನ ತೊಟ್ಟಿಲು ಸಾಕ್ಷಿಯಾಗಿದೆ. ಇಲ್ಲಿಯ ಬಣ್ಣದ ತೊಟ್ಟಿಲು ಇದೀಗ ನಟ ಡಾಲಿ ಧನಂಜಯ ಅವರ ಮನೆ ಸೇರಲಿದೆ.
ಹೀಗಿದೆ ವಿಶೇಷತೆ: ಸಂಪೂರ್ಣ ಸಾಗವಾನಿ ಕಟ್ಟಿಗೆಯಲ್ಲಿಯೇ ತೊಟ್ಟಿಲು ಮಾಡಲಾಗುತ್ತದೆ. ವಿವಿಧ ಧರ್ಮಕ್ಕೆ ಅನುಗುಣವಾಗಿ ತೊಟ್ಟಿಲಗಳ ಮೇಲೆ ಚಿತ್ರಗಳನ್ನು ಬಿಡಿಸಲಾಗುತ್ತದೆ. ತೊಟ್ಟಿಲ ಮೇಲೆ ದೇಶಿ ಸಂಸ್ಕೃತಿ ಸಾರುವ ಹಾಗೂ ಪಾರಂಪರಿಕ ಹೆಮ್ಮೆಯ ಪ್ರತೀಕವಾಗಿರುವ ಕೃಷ್ಣಾವತಾರ ಕಥೆಗಳ ಚಿತ್ರ, ಸುತ್ತಲೂ ರಾಮಾಯಣ, ಮಹಾಭಾರತದ ಅನೇಕ ದೃಶ್ಯದ ಚಿತ್ರಗಳನ್ನು ಬಿಡಿಸಲಾಗುತ್ತದೆ. ಹೀಗೆ ಒಂದು ತೊಟ್ಟಿಲು ತಯಾರಿಸಲು ಒಂದು ತಿಂಗಳು ಬೇಕಾಗುತ್ತದೆ.
ಗಣ್ಯರ ಮನೆಗೆ ಸೇರಿದೆ: ಈಗಾಗಲೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು, ವಿದೇಶಕ್ಕೂ ಕಲಘಟಗಿ ತೊಟ್ಟಿಲು ಉಡುಗೊರೆಯಾಗಿ ಹೋಗಿದೆ. ವರನಟ ಡಾ. ರಾಜಕುಮಾರ, ನಟ ಯಶ್, ನಟ ಅಭಿಷೇಕ ಅಂಬರೀಶ ಅವರ ಪುತ್ರ ಸೇರಿದಂತೆ ಅನೇಕರ ಮನೆಯಲ್ಲಿ ಕಲಘಟಗಿ ತೊಟ್ಟಿಲು ಇದೆ. 2023ರಲ್ಲಿ ಧಾರವಾಡಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಜಿಲ್ಲಾಡಳಿತದಿಂದ ಬಣ್ಣದ ತೊಟ್ಟಿಲನ್ನು ಕಾಣಿಕೆಯಾಗಿ ನೀಡಲಾಗಿದೆ.