ಉದ್ಯೋಗ ಖಾತ್ರಿ ಯೋಜನೆಯಡಿ NREGA Workers ನಕಲಿ ಕಾರ್ಮಿಕರ ಹಾಜರಾತಿ ತಡೆಯುವ ಉದ್ದೇಶದ ಇ-ಕೆವೈಸಿ  
ಧಾರವಾಡ

ನರೇಗಾ ಕೂಲಿಕಾರರ ಇ-ಕೆವೈಸಿಯಲ್ಲಿ ದ.ಕ. ಪ್ರಥಮ, ಕಲಬುರಗಿ ಲಾಸ್ಟ್ NREGA Workers e-kyc

ಪ್ರಮುಖ ಮುಖ್ಯಾಂಶಗಳು

  • ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನಕಲಿ ಕೂಲಿಕಾರರ ಹಾಜರಾತಿ ತಡೆಗೆ ಎನ್‌ಎಂಎಂಎಸ್ ವ್ಯವಸ್ಥೆ
  • ಧಾರವಾಡ ಜಿಲ್ಲೆಗೆ 19ನೇ ಸ್ಥಾನ
ವಿವೇಕಾನಂದ ದಾಸನಕೊಪ್ಪ ಹುಬ್ಬಳ್ಳಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ NREGA Workers ನಕಲಿ ಕಾರ್ಮಿಕರ ಹಾಜರಾತಿ ತಡೆಯುವ ಉದ್ದೇಶದಿಂದ ನಡೆಸುತ್ತಿರುವ ಕಾರ್ಮಿಕರ ಇ-ಕೆವೈಸಿ ಪ್ರಗತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಕೊನೇ ಸ್ಥಾನದಲ್ಲಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಕೈಗೊಂಡ ಸಂದರ್ಭದಲ್ಲಿ ನಕಲಿ ಕಾರ್ಮಿಕರ ಹಾಜರಾತಿ ಹಾಕುವುದು, ಪುರುಷರಿಗೆ ಸೀರೆ ಉಡಿಸಿ, ಮಹಿಳಾ ಕೂಲಿಕಾರರ ಹಾಜರಾತಿ ತೋರಿಸಿ ವೇತನ ಪಾವತಿ ಪ್ರಕರಣಗಳು ಬಾಗಲಕೋಟೆ, ಯಾದಗಿರಿಯಲ್ಲಿ ಬೆಳಕಿಗೆ ಬಂದಿದ್ದವು. ಈ ರೀತಿಯಲ್ಲಿ ಯೋಜನೆ ಹಣ ದುರ್ಬಳಕೆ ಹಾಗೂ ನಕಲಿ ಕಾರ್ಮಿಕರ ಹಾಜರಾತಿ ತಡೆಯುವ ನಿಟ್ಟಿನಲ್ಲಿ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ (ಎನ್‌ಎಂಎಂಎಸ್)ಅಡಿ ಇ-ಕೆವೈಸಿ ವ್ಯವಸ್ಥೆ ರೂಪಿಸಲಾಗಿದೆ. ಈಗಾಗಲೇ ಉದ್ಯೋಗ ಚೀಟಿಗಳಿಗೆ ಕೂಲಿಕಾರರ ಆಧಾರ ದತ್ತಾಂಶ ಜೋಡಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎನ್‌ಎಂಎಂಎಸ್ ಆ್ಯಪ್ ಮೂಲಕ ಕೂಲಿಕಾರರ ಮುಖ ಚಹರೆ ತಾಳೆ ಮಾಡಲಾಗುತ್ತಿದೆ. ಗ್ರಾಪಂ ಹಾಗೂ ನರೇಗಾ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಎನ್‌ಎಂಎಂಎಸ್ ಆ್ಯಪ್ ಹಾಕಿಕೊಂಡು ಕೂಲಿಕಾರರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ದಾಖಲಿಸಿ, ಅವರ ಮುಖ ಚಹರೆ ಸೆರೆ ಹಿಡಿದು ಇ-ಕೆವೈಸಿ ಮಾಡುತ್ತಿದ್ದಾರೆ.
ಸಮುದಾಯ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರ ಪಟ್ಟಿಯನ್ನು ಒಂದು ದಿನ ಮುಂಚೆ ನರೇಗಾ ತಂತ್ರಾಂಶದ ನಾಮಿನಲ್ ಮಸ್ಟರ್‌ರೋಲ್‌ನಲ್ಲಿ (ಎನ್‌ಎಂಆರ್) ದಾಖಲಿಸಲಾಗುತ್ತದೆ. ಕಾಯಕ ಬಂಧು ಹಾಗೂ ಬಿಎಫ್‌ಟಿಗಳು ಕಾಮಗಾರಿ ನಡೆದಿರುವ ಸ್ಥಳಕ್ಕೆ ಹೋಗಿ, ದಿನಕ್ಕೆ ಎರಡು ಬಾರಿ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಕಾರ್ಮಿಕರ ಹಾಜರಾತಿ ದಾಖಲಿಸುತ್ತಿದ್ದರು. ಆದರೆ, ಈ ಮೊದಲು ಎನ್‌ಎಂಆರ್‌ನಲ್ಲಿ ದಾಖಲಿಸಿರುವ ಕಾರ್ಮಿಕರ ಬದಲಿಗೆ ಬೇರೆ ಕಾರ್ಮಿಕರು ಬಂದಿದ್ದರೂ ಹಾಜರಾತಿ ಹಾಕಲಾಗುತ್ತಿತ್ತು. ಇದೀಗ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಮುಖ ಚಹರೆ ಸೆರೆ ಹಿಡಿದು ಇ-ಕೆವೈಸಿ ಮಾಡುತ್ತಿರುವುದರಿಂದ ನಕಲಿ ಕೂಲಿಕಾರರು ಕೆಲಸಕ್ಕೆ ಹಾಜರಾಗುವುದನ್ನು ತಪ್ಪಿಸಲಿದೆ. ಒಂದು ವೇಳೆ ಹಾಜರಾದರೂ ಅವರ ಹಾಜರಾತಿ ದಾಖಲಿಸುವುದು ಸಾಧ್ಯವಾಗುವುದಿಲ್ಲ. ಹೀಗಾಗಿ, ನಕಲಿ ಕಾರ್ಮಿಕರ ಹಾಜರಾತಿ ಹಾಗೂ ಅಕ್ರಮವಾಗಿ ಕೂಲಿ ವೇತನ ಪಾವತಿಗೆ ತಡೆ ಬೀಳಲಿದೆ.
ಇಲಾಖೆ ಸಚಿವರ ತವರಲ್ಲೇ ಹಿನ್ನಡೆ: ರಾಜ್ಯದ 31 ಜಿಲ್ಲೆಗಳಲ್ಲಿ 74.83 ಲಕ್ಷ ಸಕ್ರಿಯ ಕೂಲಿಕಾರರಿದ್ದಾರೆ. ಇದರಲ್ಲಿ 74.82 ಲಕ್ಷ ಕೂಲಿಕಾರರ ಜಾಬ್‌ಕಾರ್ಡ್‌ಗೆ ಆಧಾರ ಜೋಡಣೆ ಆಗಿದ್ದರೆ, 58.83 ಲಕ್ಷ ಕೂಲಿಕಾರರ ಇ-ಕೆವೈಸಿ ಆಗಿದೆ. ಸಕ್ರಿಯ ಕಾರ್ಮಿಕರ ಇ-ಕೆವೈಸಿ ಪ್ರಗತಿಯಲ್ಲಿ ದಕ್ಷಿಣ ಕನ್ನಡ ಶೇ. 90.88, ಕೊಪ್ಪಳ ಶೇ. 89.02, ಬಳ್ಳಾರಿ ಶೇ. 88.37, ಬೆಂಗಳೂರು ಗ್ರಾಮಾಂತರ ಶೇ. 87.33 ಹಾಗೂ ವಿಜಯನಗರ ಜಿಲ್ಲೆ ಶೇ. 87.32ರಷ್ಟು ಗುರಿ ಸಾಧಿಸಿ ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ.
ಧಾರವಾಡ ಶೇ. 79.7ರಷ್ಟು ಇ- ಕೆವೈಸಿ ಮಾಡಿ, 19ನೇ ಸ್ಥಾನದಲ್ಲಿದೆ. ವಿಜಯಪುರ ಶೇ. 69.98, ಬೀದರ ಶೇ. 69.25, ಯಾದಗಿರಿ ಶೇ. 68.26, ಚಾಮರಾಜನಗರ ಶೇ. 67.41 ಹಾಗೂ ಕಲಬುರಗಿ ಶೇ. 60.6ರಷ್ಟು ಇ-ಕೆವೈಸಿ ಮಾಡಿ ಕ್ರಮವಾಗಿ ಕೊನೆಯ ಐದು ಸ್ಥಾನಗಳಲ್ಲಿವೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ತವರು ಜಿಲ್ಲೆ ಕಲಬುರಗಿ ಇ-ಕೆವೈಸಿ ಪ್ರಗತಿಯಲ್ಲಿ ಕೊನೇ ಸ್ಥಾನದಲ್ಲಿದೆ.
74.83 ಲಕ್ಷ ಸಕ್ರಿಯ ಕೂಲಿಕಾರರು: ರಾಜ್ಯದಲ್ಲಿ 81. 92ಲಕ್ಷ ಜಾಬ್‌ಕಾರ್ಡ್‌ಗಳಿದ್ದು, 1.84 ಕೋಟಿ ಕಾರ್ಮಿಕರಿದ್ದಾರೆ. ಇದರಲ್ಲಿ 41.6 ಲಕ್ಷ ಸಕ್ರಿಯ ಜಾಬ್‌ಕಾರ್ಡ್‌ಗಳಿದ್ದು, 74.83 ಲಕ್ಷ ಕೂಲಿಕಾರರು ಸಕ್ರಿಯವಾಗಿ ಕೆಲಸದಲ್ಲಿ ತೊಡಗಿದ್ದಾರೆ.