District ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹುಬ್ಬಳ್ಳಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
- ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶ ಸುಧಾರಿಸಲು ಹಲವು ಕ್ರಮ
- ಈ ಬಾರಿ ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ.
- ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲಾಗುವುದು.
ಇಲ್ಲಿನ ತಾಲೂಕು ಆಡಳಿತಸೌಧದ ಹುಬ್ಬಳ್ಳಿ ಶಹರ ತಹಶೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯಲ್ಲಿ ಯಾವುದೇ ಹಳ್ಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ಮುಂದಿನ ವಾರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಧಾರವಾಡ ಜಿಲ್ಲೆಯ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಫಲಿತಾಂಶ ಪ್ರಮಾಣ ಹೆಚ್ಚಿಸಲು ಈ ಹಿಂದಿನಿಂದಲೂ ಹಲವಾರು ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಬಾರಿ ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ.
ಶಾಲೆ, ಕಾಲೇಜುಗಳಲ್ಲಿ ಹೆಚ್ಚುವರಿ ತರಗತಿಗಳು, ಮಾರ್ಗದರ್ಶನ ಶಿಬಿರಗಳು, ಪ್ರಶ್ನೆಪತ್ರಿಕೆ ಅಭ್ಯಾಸ ಹಾಗೂ ವಿಷಯ ತಜ್ಞರಿಂದ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲಾಗುವುದು. ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ದೂರು ಸ್ವೀಕಾರ ವ್ಯವಸ್ಥೆ ಬಲಪಡಿಸಲಾಗುವುದು. ಬರುವ ದೂರುಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೀದಿ ನಾಯಿಗಳ ನಿಯಂತ್ರಣಕ್ಕೆ ಸಮಗ್ರ ಸಮೀಕ್ಷೆ ನಡೆಸಲಾಗಿದೆ. ಅವುಗಳನ್ನು ಸೂಕ್ತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಹುಬ್ಬಳ್ಳಿ ಶಹರ ತಹಶೀಲ್ದಾರ ಮಹೇಶ ಗಸ್ತೆ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಜೆ.ಬಿ. ಮಜ್ಜಗಿ, ಗ್ರೇಡ್ 2 ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ, ಕಂದಾಯ ನಿರೀಕ್ಷಕ ರವಿ ಬೆಣ್ಣೂರ, ಇತರರಿದ್ದರು.