ಧಾರವಾಡ: ಪೊಲೀಸ್ ಇಲಾಖೆಯು ತ್ಯಾಗ, ಶಿಸ್ತು, ಸಮಯ ಪ್ರಜ್ಞೆಗೆ ಸಾಕ್ಷಿಯಾಗಿದೆ. ಪೊಲೀಸ್ ಸಿಬ್ಬಂದಿ ಶಿಸ್ತು, ಸಾಮಾಜಿಕ ಕಳಕಳಿ ಮತ್ತು ಸಮಯ ಪ್ರಜ್ಞೆಯು ನಮ್ಮ ಗೌರವ ಹೆಚ್ಚಿಸುತ್ತದೆ. ಇಲಾಖೆಗೆ ಸೇರುವಾಗ ಕೇಳಿದ ಪಾಠ, ಇಲಾಖೆಯ ನೀತಿ ನಿಯಮಗಳನ್ನು ನಿವೃತ್ತಿಯವರೆಗೂ ಸ್ಮರಿಸಿ ಅಳವಡಿಸಿಕೊಂಡು ಮುನ್ನಡೆದರೆ ಸಾರ್ಥಕ ಸೇವೆ ನಮ್ಮದಾಗುತ್ತದೆ ಎಂದು ನಿವೃತ್ತ ಪೊಲೀಸ್ ಉಪನಿರೀಕ್ಷಕಿ ಡಿ. ಚಾಮುಂಡೇಶ್ವರಿ ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಮತ್ತು ನಿವೃತ್ತರ ಸೇವಾ ಸ್ಮರಣೆ ಹಾಗೂ ಗೌರವ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಇಲಾಖೆಯಲ್ಲಿ ಸಾಕಷ್ಟು ಆಧುನಿಕತೆ ಬಂದಿದೆ. ಅಪರಾಧ ಪತ್ತೆ, ವೃತ್ತಿ ಕೌಶಲ ತುಂಬಲು ವಿಜ್ಞಾನ ತಂತ್ರಜ್ಞಾನ ಬಳಸಲಾಗುತ್ತಿದೆ. ಎಲ್ಲರೂ ಹೊಸತನ್ನು ಅಳವಡಿಸಿಕೊಂಡು ಸುಗಮವಾಗಿ ಮತ್ತು ಅಕ್ಕರೆಯಿಂದ ಕಾರ್ಯಗಳನ್ನು ನಿರ್ವಹಿಸುವ ವಾತಾವರಣ ಎಲ್ಲ ಪೊಲೀಸ್ ಕಚೇರಿ ಮತ್ತು ಠಾಣೆಗಳಲ್ಲಿ ಮೂಡಬೇಕು. ನಾವು ಶಿಸ್ತಿನಿಂದ ನಡೆದರೆ ಗೌರವ ಸಿಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಪೊಲೀಸ್ ಕಲ್ಯಾಣ ಚಟುವಟಿಕೆಗಳ ಕುರಿತು ವರದಿ ವಾಚಿಸಿದರು. ವೈಎಂ ದೊಡ್ಡಮನಿ, ಪಿ.ಎಚ್. ಡಾವಣಗೇರಿ ನಿರೂಪಿಸಿದರು. ಡಿಎಆರ್ ಡಿಎಸ್‌ಪಿ ಡಿ.ಎಸ್. ಧನಗರ ವಂದಿಸಿದರು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಎಚ್.ಮುಂದಿನಮನಿ, ಆರ್.ಬಿ.ಹಳ್ಳಿ, ಕೆ.ವಿ. ವಾಲಿಕಾರ ಹಾಗೂ ಎಸ್.ಐ.ಗದಗ, ಎಸ್.ಸಿ. ಗಂಡಲಾಟಿ, ಎಚ್.ಟಿ. ಬಂಡಿವಡ್ಡರ, ಐ.ಡಿ.ಭಾವಿಮನಿ, ಎಂ.ಆರ್.ಗೋಲಂದಾಜ್, ವೈ.ಎಸ್. ಮೇಟಿ, ಎಚ್.ಜೆ. ಜಾಧವ ಮತ್ತು ಸಿಎಚ್‌ಸಿಗಾಳದ ಡಿ.ವೈ. ಮುಮ್ಮಿಗಟ್ಟಿ, ಎನ್.ವೈ. ಭರಮನ್ನವರ, ಯು.ಆರ್. ಮೆಟ್ಟಿನ, ಎ.ಎನ್. ಚಿಕಣಿ, ಎಂ.ಎಸ್. ಕೊಟಂಕಿ ಅವರನ್ನು ಸನ್ಮಾನಿಸಲಾಯಿತು.
ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಆರ್ ಎಸ್‌ಐ ವಾಸು ರಕ್ಷೇದ ನೇತೃತ್ವದ 1ನೇ ತಂಡ, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್.ಐ. ಸುನೀಲಕುಮಾರ ಎಂ.ಎಲ್ ನೇತೃತ್ವದ 2ನೇ ತಂಡ ಹಾಗೂ ಎಸ್‌ಪಿ ಕಚೇರಿಯ ನಿಸ್ತಂತು ವಿಭಾಗದ ಜಿಲ್ಲಾ ನಿಯಂತ್ರಣದ ಕೊಠಡಿಯ ಮಹಿಳಾ ಪಿಎಸ್‌ಐ ನಿರ್ಮಲಾ ಜಂಬಗಿ, ಡಿಎಆರ್ ಆರ್‌ಎಸ್‌ಐ ಮಂಜುನಾಥ ಕುರುಗೋಡಿ ನೇತೃತ್ವದ 4ನೇ ತಂಡದ ಸದಸ್ಯರು ಆಕರ್ಷಕ ಪಥ ಸಂಚಲನದ ಮೂಲಕ ಗೌರವ ವಂದನೆ ಸಲ್ಲಿಸಿದರು. ಎಆರ್‌ಎಸ್‌ಐ ವೈ.ಎಫ್. ಭಜಂತ್ರಿ ಹಾಗೂ ಎಪಿಸಿ ಸಾಗರ ಬಸರಿಕೋಡಿ ಅವರ ನೇತೃತ್ವದ ಜಿಲ್ಲಾ ಪೊಲೀಸ್ ಬ್ಯಾಂಡ ತಂಡವು ಆಕರ್ಷಕವಾಗಿ ಮತ್ತು ಸುಶ್ರಾವ್ಯವಾಗಿ ರಾಷ್ಟ್ರಗೀತೆ ಹಾಗೂ ಸಂಗೀತ ನುಡಿಸಿತು.
ಕೆಎಸ್‌ಐಎಸ್‌ಎಫ್ ಕಮಾಂಡೆಂಟ್ ಗುರುನಾಥ, ಸಿಇಎನ್ ಪೊಲೀಸ್ ಠಾಣೆಯ ಡಿಎಸ್‌ಪಿ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ವೃತ್ತದ ಡಿಎಸ್‌ಪಿ ವಿನೋದ ಮುಕ್ತೆದಾರ ಇತರರಿದ್ದರು.